ಪುಸ್ತಕ ಪರಿಚಯ : ತುಂಗಾ | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಪುಸ್ತಕ ಪರಿಚಯ : ತುಂಗಾ

ಎಷ್ಟೋ ಮಂದಿಗೆ ತಾವು ಪಡೆದ ಶಿಕ್ಷಣದ ಬಗ್ಗೆ, ತಮ್ಮ ಮಕ್ಕಳು ಪಡೆಯುತ್ತಿರುವ ಶಿಕ್ಷಣದ ಬಗ್ಗೆ ಅಸಮಧಾನ ಇದೆ. ಆದರೆ ಏನೂ ಮಾಡಲಾರದ ಪರಿಸ್ಥಿತಿ. ಅಬ್ಬಬ್ಬಾ ಎಂದರೆ ಪೋಷಕರು ತಮ್ಮ ಮಕ್ಕಳ್ಳನ್ನು ದುಬಾರಿ ಶಿಕ್ಷಣವನ್ನು ಪ್ರಖ್ಯಾತಗೊಳಿಸಿರುವ ಅಂತರಾಷ್ಟ್ರೀಯ/ರಾಷ್ಟ್ರೀಯ ಇತ್ಯಾದಿ ಹಣೆಪಟ್ಟಿಯುಳ್ಳ ಶಾಲೆಗಳಿಗೆ ಕಳುಹಿಸಿ ಸಮಾಧಾನ ತಂದುಕೊಳ್ಳುವುದು ಈಗ ಕೆಲವರಿಗೆ ರೂಢಿ, ಕೆಲವರಿಗೆ ಪ್ರತಿಷ್ಟೆ ಮತ್ತೂ ಕೆಲವರಿಗೆ ಅನಿವಾರ್ಯ. ನಮ್ಮ ಸರ್ಕಾರಿ ಶಾಲೆಗಳಿಗೆ ಹೋಲಿಸಿದಾಗ ಈ ದುಬಾರಿ ಶಾಲೆಗಳಲ್ಲಿ ಮಕ್ಕಳು ತೆತ್ತುವ ಶುಲ್ಕಕ್ಕೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆಯುವ ಅಪರಿಮಿತ ಅವಕಾಶಗಳಿದ್ದಾಗ್ಯೂ ಕೂಡ, ಮಕ್ಕಳು ಮತ್ತದೇ ಅನಗತ್ಯ ಸ್ಪರ್ಧೆಗಿಳಿದು ಓದುವ, ಕಲಿಯುವುದು ಒಂದು ಆನಂದ ತರುವ ಆಟವಾಗುವುದರ ಬದಲು ಒಂದು ಸ್ಪರ್ದೆಯಾಗಿ ಹೋಗಿಬಿಡುತ್ತದೆ. ಕಲಿಕೆಗಿಂತ, ಗಳಿಸಿವ ಅಂಕಗಳು ಮೇಲುಗೈ ಪಡೆಯುತ್ತದೆ. ಮಕ್ಕಳು ತಮ್ಮ ಮುಗ್ಧತೆಯನ್ನು ಅಗತ್ಯಕ್ಕೆ ಮೊದಲೇ ಕಳೆದುಕೊಂಡುಬಿಡುತ್ತಾರೆ. ಇದಕ್ಕೆ ಶಾಲೆಗಳನ್ನಷ್ಟೇ ದೂರಲಾಗದೆ, ಕೆಲವೊಮ್ಮೆ ಪೋಷಕರೂ ಕಾರಣರಾಗಿಬಿಡುತ್ತಾರೆ.

ಇಂತಹದ್ದಕ್ಕೆಲ್ಲ ಉತ್ತರವೆಂಬಂತೇನೋ ಇದೆ, ಮೇಫ್ಲವರ್ ಪ್ರಕಟನೆಯ ವಿ. ಗಾಯತ್ರಿಯವರ ’ತುಂಗಾ’ ಕಾದಂಬರಿ. ಪುಸ್ತಕ ಶೀರ್ಷಿಕೆಯ ಮೇಲೆ ’ಕಾಡುವ ಕಾದಂಬರಿ’ ಎಂಬ ಹಣೆಪಟ್ಟೆ ಹೊಂದಿರುವ ಈ ಪುಸ್ತಕ ನಿಜಕ್ಕೂ ಕಾಡುತ್ತದೆ. ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ. ಯೊಚಿಸಲು ಉತ್ತೇಜಿಸುತ್ತದೆ. ಜಪಾನಿನ ಟೆಲಿವಿಷನ್ ಕ್ಷೇತ್ರದ ತೆತ್ಸುಕೋ ಕುರೋಯಾನಾಗಿಯ ’ತುತ್ತೋ ಚಾನ್’ ಎಂಬ ಪುಸ್ತಕದಿಂದ ಪ್ರೇರಣೆ ಪಡೆದು ಕನ್ನಡಕ್ಕೆ ಒಗ್ಗಿಸಿ ಒಂದು ಅಪೂರ್ವ ಕೃತಿಯನ್ನು ಸೃಷ್ಟಿಸಿದ್ದಾರೆ ವಿ. ಗಾಯಿತ್ರಿ.

ತುಂಗಾ ಎಂಬ ತುಂಟ ಮಗು, ಸರ್ಕಾರಿ ಶಾಲೆಯಿಂದ ಹೊರದೂಡಲ್ಪಡುತ್ತಾಳೆ. ಸರ್ಕಾರಿ ಶಾಲೆಯ ಮೇಷ್ಟ್ರುಗಳ ವರ್ತನೆಯ ವೈಖರಿ, ನೀವು ಸರ್ಕಾರಿ ಶಾಲೆಗಳಲ್ಲಿ ಓದಿದ್ದವರಾದರೆ ಕಣ್ಣಿಗೆ ಕಟ್ಟಿ ಬರುತ್ತದೆ. ಈ ಹಂತದಲ್ಲಿ ಬರುವ ತುಂಗಾಳ ಚಿತ್ರಣ, ಅವಳ ಮುಗ್ಧತೆ ಬಹಳ ಉತ್ತಮವಾಗಿ ಮೂಡಿ ಬಂದಿದೆ. ತುಂಗಾ ಹೇಗೆ ತಾನು ದೊಡ್ಡವಳಾದ ಮೇಲೆ ಕಂಡಕ್ಟರ್ ಆಗಬೇಕು, ಪೋಲೀಸ್ ಇನ್ಸ್ಪೆಕ್ಟರ್ ಆಗಬೇಕು, ದೊಂಬರಾಟದವಳಾಗಬೇಕು ಎಂದುಕೊಳ್ಳುತ್ತಾಳೆ ಎಂಬುದನ್ನು ಬಹಳ ಚೆನ್ನಾಗಿ ಅಕ್ಷರಗಳಲ್ಲಿ ಮೂಡಿಸಿರುವ ಗಾಯತ್ರಿ, ಓದುಗರನ್ನು ಬಾಲ್ಯಕ್ಕೆ ಎಳೆದೊಯ್ಯುತ್ತಾರೆ. ತುಂಗಾ ಗುಬ್ಬಚ್ಚಿಗಳ ಜೊತೆ ಮಾತನಾಡುವ ಪ್ರಸಂಗವನ್ನು ಮೇಷ್ಟು ತುಂಗಾಳ ತಾಯಿಗೆ ಹೇಳುವುದು, ತುಂಗಾ ದೊಂಬರಾಟದವರನ್ನು ಶಾಲೆಗೆ ಕರೆತರುವುದು ಇತ್ಯಾದಿ ಪ್ರಸಂಗಗಳು ಕಣ್ಣಿಗೆ ಕಟ್ಟುತ್ತವೆ. ಸರ್ಕಾರಿ ಶಾಲೆಯಿಂದ ಹೊರಬಿದ್ದ ತುಂಗಾ ನಂತರ ’ಮಾಂಡವಿ’ ಎಂಬುವವರು ನಡೆಸುವ ಪ್ರಾಥಮಿಕ ಶಾಲೆಗೆ ಸೇರಿಕೊಳ್ಳುತ್ತಾಳೆ. ಈ ಶಾಲೆ ಮಾಮೂಲಿ ಶಾಲೆಯಂತಲ್ಲ. ಮಕ್ಕಳಿಗೆ ಪಾಠಗಳನ್ನು ತಮಗೆ ಯಾವಾಗ ಬೇಕೋ ಆಗ ಕಲಿತುಕೊಳ್ಳಬಹುದು. ಬಹುತೇಕ ಪಠ್ಯೇತರ ಚಟುವಟಿಗೆಗಳಿಗೆ ಸಮಯ ಮೀಸಲು. ಆದರೆ ಯಾವುದರಲ್ಲೂ ಆಡಂಭರವಿಲ್ಲ. (ಖಾಸಗೀ /ಅಂತರಾಷ್ಟ್ರೀಯ ಶಾಲೆಗಳಲ್ಲಿ ನಿಮ್ಮ ಮಕ್ಕಳು ಕಲಿಯುವವರಾಗಿದ್ದರೆ ಈ ಅಸ್ವಾಭಾವಿಕ ಆಡಂಭರತೆ ನಿಮ್ಮ ಅನುಭವಕ್ಕೆ ಬಂದಿರುತ್ತದೆ. ಮಕ್ಕಳು ತಮ್ಮಷ್ಟಕ್ಕೆ ತಾವೇ ಮಾಡುವ ಪಠ್ಯೇತರ ಚಟುವಟಿಕೆಗಳಿಂತಲೂ, ತಮ್ಮ ಮಗು ಚೆನ್ನಾಗಿ ಮಾಡಬೇಕು ಎಂಬ ಹಂಬಲದಿಂದ ಪೋಷಕರೇ ಮಕ್ಕಳ ಮೇಲೆ ಬಿದ್ದು ತಾವೇ ಚಟುವಟಿಕೆಗಳನ್ನು ಮಾಡಿ ಶಾಲೆಗೆ ಕಳುಹಿಸುವುದು ಅತೀ ಸಾಮಾನ್ಯ!). ಈ ಹಂತದಲ್ಲಿ ಕಾದಂಬರಿ, ಮಾಂಡೋವಿಯವರು ತಮ್ಮ ಶಾಲೆಗಳಲ್ಲಿ ಮಾಡುವ ವಿಭಿನ್ನ ಪ್ರಯೋಗಗಳ ವಿವರಣೆಗೆ ಹೋಗಿಬಿಡುತ್ತದೆ. ಕೆಲವೊಮ್ಮೆ ಆ ಪ್ರಯೋಗಗಳೆಲ್ಲಾ ಸರಿಯಾದುವೇ, ಸ್ವಲ್ಪವೂ ಹುಳುಕಿಲ್ಲದವು ಎಂಬ ತೀರ್ಪು ಕೊಡುವಂತೆ ಮುಂದುವರೆಯುತ್ತದೆ. ತುಂಟ ಮಗು ಎಂದು ಪ್ರಸಿದ್ಧಿ ಪಡೆದಿದ್ದ ತುಂಗಾ, ಯಾವ ವಿಶೇಷ ಗಮನವೂ ಇಲ್ಲದೆ, ಸ್ವಾಭಾವಿಕವಾಗಿ ಒಳ್ಳೆಯ ಹುಡುಗಿ ಎಂಬ ಹೆಸರು ಪಡೆಯುತ್ತಾಳೆ. ವಿಕಲಾಂಗ ಮಕ್ಕಳ ತೊಂದರೆಗಳಿಗೆ ಸ್ಪಂದಿಸುತ್ತಾಳೆ. ಇಂತಹ ವಿವರಣೆಗಳು ಹೆಚ್ಚು ಧನಾತ್ಮಕವಾಗಿಯೇ ಕೂಡಿರುವುದು ಕೆಲವೊಮ್ಮೆ ಆಶ್ಚರ್ಯ ತರಿಸುತ್ತದೆ. ಆ ಶಾಲೆ ನಡೆಸುವಾಗ, ಮಾಂಡೋವಿಯವರಿಗೆ ಆಗಬಹುದಾದ ತೊಂದರೆಗಳು, ಅಡೆತಡೆಗಳು ಆಗೊಮ್ಮೆ ಈಗೊಮ್ಮೆ ಸುಳಿದರೂ ಅವಕ್ಕೆ ಹೆಚ್ಚು ಮಾನ್ಯತೆ ಸಿಗದೆ, ಈ ರೀತಿ ಒಂದು ಪರ್ಯಾಯ ಶಾಲೆಯನ್ನು ಸುಸೂತ್ರವಾಗಿ ನಡೆಸಬಹುದು ಎಂಬ ಸಂದೇಶ ಕೊಡುವಂತೆ ಕಾದಂಬರಿ ಮುಂದುವರೆಯುತ್ತದೆ. ಇಲ್ಲಿ ಇನ್ನೊಂದು ಮಹತ್ವದ ಪಾತ್ರ ಎಂದರೆ ತುಂಗಾಳ ಅಮ್ಮನದು. ತಾಯಿ, ಮಗಳು ಎಷ್ಟೇ ತುಂಟಿಯಾದರೂ ಹೊಡೆದು ಬಡೆದು ಬುದ್ಧಿ ಹೇಳುವುದಿಲ್ಲ. ಹೆಚ್ಚು ಬೇಸರಗೊಳ್ಳುವುದಿಲ್ಲ. ಮಗಳ ತುಂಟತನಕ್ಕೆ ನಗುತ್ತಾಳೆ. ಮಗಳ ಆಸೆಗಳಿಗೆ ಆಸರೆಯಾಗುತ್ತಾಳೆ. ಇಲ್ಲಿ ತುಂಗಾಳ ಅಮ್ಮನದು ಒಂದು ಆದರ್ಶ ಪಾತ್ರ! ಇಂದಿನ ಒತ್ತಡದ ಜೀವನದ ದಿನಗಳಲ್ಲಿ ಇಂತಹ   ಪಾತ್ರಗಳು ನಿಜಜೀವನದಲ್ಲಿ ಅಪರೂಪವೇನೋ! ಇನ್ನು ತುಂಗಾಳ ಅಪ್ಪ ಚಂಡೆ ನುಡಿಸುತ್ತಾನೆ ಯಕ್ಷಗಾನದಲ್ಲಿ ಎಂಬುದನ್ನು ಬಿಟ್ಟರೆ, ತುಂಗಾಳ ಮತ್ತು ತನ್ನ ಅಪ್ಪನ ಮಧ್ಯೆ ಹೆಚ್ಚು ಸಂಪರ್ಕವಿಲ್ಲ ಎಂಬುವಂತೆ ಚಿತ್ರಿಣಗೊಂಡಿದೆ ಕಾದಂಬರಿ. ಆದುದರಿಂದ ತುಂಗಾಳ ಅಪ್ಪನ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಿಲ್ಲ.

ಒಟ್ಟಿನಲ್ಲಿ ಒಂದು ಮಗುವಿನ ಶೈಕ್ಷಣಿಕ, ಮಾನಸಿಕ ಬೆಳವಣಿಗೆಗೆ ಒಂದು ಅಪರೂಪದ ಶಾಲೆ ಹೇಗೆ ಸಹಾಯ ಮಾಡುತ್ತದೆ ಎಂಬ ಚಿತ್ರಣವಿರುವ ಈ ಕಾದಂಬರಿ ಅಪೂರ್ವ, ಉಲ್ಲಾಸಕರವಾದ ಓದು! ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟವರಂತೂ ಓದಲೇ ಬೇಕಾದ ಪುಸ್ತಕ. ನಿಮ್ಮ ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ನಿಮಗೆ ಇದ್ದೇ ಇದೆಯಾದ್ದರಿಂದ ನೀವು ತಪ್ಪಿಸಿಕೊಳ್ಳಬಾರದ ಪುಸ್ತಕ. ನನಗೂ ಶಿಕ್ಷಣಕ್ಕೂ ಸಂಬಂಧ ಇಲ್ಲಪ್ಪ ಎನ್ನುವುದಾದರೂ ಒಮ್ಮೆ ಓದಿ ಹೇಗಿದೆ ಹೇಳಿ!

ಇನ್ನುಳಿದಂತೆ, ಜಿ ಎನ್ ಮೋಹನ್ ರವರ ಪುಸ್ತಕದ ಆರಂಭದಲ್ಲಿ ’ಈ ಪುಸ್ತಕ ನಂಗಿಷ್ಟ’ ಎಂಬ ಚಂದದ ಪರಿಚಯ ಮಾಡಿಕೊಡುತ್ತಾರೆ ಪುಸ್ತಕಕ್ಕೆ. ಸೀತಾ ಶಾಲೆಯ ’ಜೇನ್ ಸಾಹಿ’ ಯವರ ವಿದ್ವತ್‌ಪೂರ್ಣ ಮುನ್ನುಡಿಯಿದೆ ಲೇಖನಕ್ಕೆ!



2 ಪ್ರತಿಕ್ರಿಯೆಗಳು

  1. ಥ್ಯಾಂಕ್ಸ್ ಗುರು
    ತುಂಗಾದ ಎಸೆನ್ಸ್ ಅನ್ನು ತುಂಬಾ ಚೆನ್ನಾಗಿ ಗ್ರಹಿಸಿದ್ದೀರಿ ಹಾಗೂ ಸಮರ್ಪಕವಾಗಿ ಬರೆದಿದ್ದೀರಿ.
    ಈ ಪುಸ್ತಕ ನಮಗೆ ಪುಸ್ತಕ ಮಾತ್ರವಲ್ಲ. ಶಿಕ್ಷಣದ ಬಗ್ಗೆ ಎಚ್ಚರಿಸುವ ಕನಸು
    -
    ಕಾದಂಬರಿ ಬರೆದ ಗಾಯತ್ರಿ ನಿಮ್ಮ ಬರಹಕ್ಕೆ ಹೀಗೆ ಪ್ರತಿಕ್ರಿಯಿಸಿದ್ದಾರೆ
    Nice to see new readers responding so precisely.

Trackbacks

  1. ಮೇಫ್ಲವರ್ ಪ್ರಕಟನೆಗಳು — ಆಕೃತಿಯಲ್ಲಿ ಲಭ್ಯ « ಆಕೃತಿ ಪುಸ್ತಕ

ಪ್ರತಿಕ್ರಿಯಿಸಿ