ನನಸಾದ ಪ್ರಕಾಶ್ ರೈ ಸವಿಗನಸು! | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ನನಸಾದ ಪ್ರಕಾಶ್ ರೈ ಸವಿಗನಸು!

ಕನ್ನಡ ಚಿತ್ರರಂಗದ ಮಟ್ಟಿಗೆ, ಕನ್ನಡ ಪ್ರೇಕ್ಷಕರಿಗೆ ಈ ಮಾದರಿ ಚಿತ್ರಗಳು ಕನಸೇ ಎನ್ನಬಹುದು. ಈ ಕನಸನ್ನು ನನಸು ಮಾಡಿರುವುದು ನೆನ್ನೆ ತೆರೆ ಕಂಡಿರುವ ಪ್ರಕಾಶ್ ರೈ ರವರ ಚೊಚ್ಚಲ ನಿರ್ದೇಶನದ ಚಲನಚಿತ್ರ “ನಾನೂ ನನ್ನ ಕನಸು”. ಇದು ಕನ್ನಡ ಚಿತ್ರರಂಗಕ್ಕೆ ಭರವಸೆ ಒದಗಿಸಿರುವ ಚಿತ್ರ ಎಂದರೆ ತಪ್ಪಾಗಲಾರದು.

ಚಲನಚಿತ್ರ ಎಂದರೆ ರೋಚಕ ತಿರುವುಗಳು, ಅತಿರಂಜಕ ಅಂತ್ಯ, ಭಾವತಿರೇಕದ ದೃಶ್ಯಗಳು ಎಂಬ ಅತೀ ಸಾಧಾರಣ ಸಿದ್ಧ ಸೂತ್ರಗಳಿಗೆ ಲಕ್ಷ್ಯ ಕೊಡದೆ ಅಪ್ಪ ಮತ್ತು ಮಗಳ ಪ್ರೀತಿಯನ್ನು ಭಾನಾತ್ಮಕ ನೆಲೆಯಲ್ಲಿ ಹಿಡಿದಿಟ್ಟಿರುವ ಚಿತ್ರ ಪ್ರೇಕ್ಷಕರಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ, ಜೀವನೋತ್ಸಾಹದ ಅಲೆಯನ್ನೆಬ್ಬಿಸುತ್ತದೆ.

ಜಯಂತ್ (ರಮೇಶ್ ಅಭಿನಯದ) ಮತ್ತು ಅವರ ಮಗಳನ್ನು ರಾಜ್ ಉತ್ತಪ್ಪ (ಪ್ರಕಾಶ್ ರೈ ಅಭಿನಯದ) ಕಾಫಿ ಎಸ್ಟೇತಿನ ಹತ್ತಿರ ಭೇಟಿ ಮಾಡಿ, ತಮ್ಮ ಮತ್ತು ತಮ್ಮ ಮಗಳ ಕಥೆಯನ್ನು ಜಯಂತ್‌ರವರೊಂದಿಗೆ ಹೇಳಿಕೊಳ್ಳುವುದರಿಂದ ಪ್ರಾರಂಭವಾಗುವ ಕಥೆ, ಮಗಳು ಹುಟ್ಟಿದ್ದು, ಮಗಳನ್ನು ಶಾಲೆಗೆ ಸೇರಿಸಿದ್ದು, ಶಾಲೆಗೆ ಸೇರಿಸುವಾಗ ತನಗಾದ ಅಗಾಧ ನೋವು, ಮಗಳು ಒಬ್ಬ ಭಿಕ್ಷುಕನನ್ನು ತಮ್ಮ ಮನೆಯಲ್ಲೇ ಇಟ್ಟುಕೊಳ್ಳುವಂತೆ ಅಪ್ಪನಿಗೆ ಒಪ್ಪಿಸುವುದು, ಮಗಳು ಕಾಲೇಜು ಸೇರುವುದು, ಮಗಳು ಮದುವೆಯಾಗುವುದು ಹೀಗೆ ಮುಂತಾದ ಕಥೆಗಳನ್ನು ಉತ್ತಪ್ಪ ಜಯಂತ್‌ರವರಿಗೆ ಹೇಳುತ್ತ ಹೋಗುತ್ತಾನೆ. ಈ ಸಂದರ್ಭಗಳಲ್ಲಿ ತನ್ನ ತನ್ನ ಮಗಳ ಭಾವನಾತ್ಮಕ ಸಂಬಂಧ ಹೇಗಿತ್ತು, ಅದು ಸಮಯದಿಂದ ಸಮಯಕ್ಕೆ ಹೇಗೆ ಬೆಳೆಯುತ್ತಿತ್ತು, ಹೇಗೆ ಬದಲಾಗುತಿತ್ತು ಎಂಬುದೇ ಚಿತ್ರದ ಮುಖ್ಯಾಂಶ.

ಪ್ರಕಾಶ್ ರೈ ರವರ ಅಭಿನಯ ಅದ್ಭುತ. ಎಷ್ಟೋ ದೃಶ್ಯಗಳಲ್ಲಿ, ಈ ದೃಶ್ಯ/ಸಂಭಾಷಣೆಯ ಅವಶ್ಯಕತೆಯಿತ್ತಾ ಎಂದುಕೊಳ್ಳುವಷ್ಟರಲ್ಲಿ ರೈ ರವರ ನಟೆನೆ ಆ ಬೇಸರವನ್ನು ಮುಸುಕಾಗಿಸುತ್ತದೆ. ಅಷ್ಟು ಪ್ರಭಾವಶಾಲಿ ಅವರ ನಟನೆ. ಪ್ರಕಾಶ್ ರೈ ರವರದೇ ಲವಲವಿಕೆಯ ಸಂಭಾಷಣೆಯಿದೆ ಚಿತ್ರಕ್ಕೆ. ಅಚ್ಯುತ್ ರಾವ್ ಕೂಡ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಸಿತಾರ, ಅಮೂಲ್ಯ ಮತ್ತು ಇನ್ನಿತರ ನಟರೂ ಕೂಡ ಎಲ್ಲೂ ಬೇಸರ ತರಿಸದಂತೆ ನಟಿದಿದ್ದಾರೆ. ಹಂಸಲೇಖರವರ ಸಂಗೀತ ಕೆಲವೊಮ್ಮೆ ಎಲ್ಲೋ ಕೇಳಿದ ರಾಗಗಳೇ ಎಂದೆನಿಸಿದರೂ, ಎರಡು ಹಾಡುಗಳು ಚೆನ್ನಾಗಿವೆ. ಮಡಿಕೇರಿ ಸುತ್ತಮುತ್ತಲಿನ ಅನಂತ್ ಅರಸ್ ರವರ ಛಾಯಾಗ್ರಹಣ ಮನಸ್ಸಿಗೆ ಮುದ ನೀಡುತ್ತದೆ. ಚಲನ ಚಿತ್ರದ ಭಾವನೆಗೆ ಪೂರಕವಾಗಿದೆ. ಮೂಲ ಕಥೆ ರಾಧಾ ಮೋಹನ್ ರವರದ್ದು.

ಲವಲವಿಕೆಯ ಹಾಸ್ಯಭರಿತ ಸಂಭಾಷಣೆ, ಅತಿರೇಕವಿಲ್ಲದ ಭಾವನಾತ್ಮಕ ದೃಶ್ಯಗಳು, ಉತ್ತಮ ಛಾಯಾಗ್ರಹಣ, ಅದ್ಭುತ ನಟನೆ, ಪ್ರೇಕ್ಷಕರಿಗೆ ಹಲವು ಉತ್ತಮ ಸಂದೇಶಗಳು ಎಲ್ಲವೂ ಒಂದೇ ಚಿತ್ರದಲ್ಲಿ ಕಂಡು ಬರುವುದು ಅತೀ ವಿರಳ. ಅಂತದ್ದೊಂದು ಚಿತ್ರ ಬಂದಿದೆ. ಈ ಚಿತ್ರಕ್ಕೆ ದುಡಿದಿರುವವರೆಲ್ಲರನ್ನೂ ಅಭಿನಂದಿಸೋಣ, ಚಲನಚಿತ್ರವನ್ನು ತಪ್ಪದೇ ನೋಡುವುದರ ಮೂಲಕ!



ಪ್ರತಿಕ್ರಿಯಿಸಿ