ಏರಿಳಿತವಿಲ್ಲದ ಇಜ್ಜೋಡು | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಏರಿಳಿತವಿಲ್ಲದ ಇಜ್ಜೋಡು

ಕನ್ನಡ ಚಿತ್ರರಂಗದ ಈ ವಿರೋಧಾಭಾಸವನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ! ಸಾಮಾನ್ಯವಾಗಿ ವ್ಯವಹಾರಿಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಬಿಡುಗಡೆಯಾಗುವ ಚಲನಚಿತ್ರಗಳಲ್ಲಿ ಅನಗತ್ಯ, ವಿಪರೀತಿ ಏರಿಳಿತ, ಇನ್ನು ಕೆಲ ದಿನಗಳ ಹಿಂದೆ ಬಿಡುಗಡೆಯಾದ ಬಹು ನಿರೀಕ್ಷಿತ? ಚಲನಚಿತ್ರ ಎಂ ಎಸ್ ಸತ್ಯು ನಿರ್ದೇಶನದ ಸುಮಾರು ೯೦ ನಿಮಿಷದ ಇಜ್ಜೋಡು ಚಲನಚಿತ್ರ ಕತೆಗ ಅಗತ್ಯವಾದ, ಬೇಕಾದ ಏರಿಳಿತಗಳೇ ಇಲ್ಲವೆಂದೆನಿಸುತ್ತದೆ.

ಹೊಯ್ಸಳ ಶಿಲ್ಪಕಲೆಯ ಒಂದು ದೇವಸ್ಥಾನದಲ್ಲಿ ವಿಶಿಷ್ಟವಾದ ಒಂದು ನೃತ್ಯ, ದೇವಸ್ಥಾನ ಮತ್ತು ನೃತ್ಯವನ್ನು ಫೋಟೋದಲ್ಲಿ ಸೆರೆಹಿಡಿಯುವ ನಾಯಕ (ಅನಿರುದ್ಧ) ನಿಂದ ಚಿತ್ರ ಪ್ರಾರಂಭ. ನಾಯಕನ ಜೀಪು ಒಂದು ಹಳ್ಳಿಯ ನಡುರಸ್ತೆಯಲ್ಲಿ ಕೆಟ್ಟು ನಿಲ್ಲುವುದರಿಂದ, ಒಬ್ಬ ಹಳ್ಳಿಗನ ಎತ್ತಿನ ಗಾಡಿಯ ಸಹಾಯದಿಂದ ಒಂದು ಊರು ಸೇರುತ್ತಾನೆ. ಅಲ್ಲಿ ಪಟೇಲನ(ರಾಮಕೃಷ್ಣ) ಮನೆಯಲ್ಲಿ ತಂಗುತ್ತಾನೆ. ಪಟೇಲನ ಮನೆಯಲ್ಲಿ ಒಬ್ಬಳು ಹುಡುಗಿ (ಮೀರಾ ಜಾಸ್ಮೈನ್). ಅವಳು ನಾಯಕನ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾಳೆ. ಮುಂದಿನ ದಿನ ಅನಿರುದ್ಧನಿಗೆ ತಮ್ಮ ಊರನ್ನು ತೋರಿಸಲೂ ಜೊತೆಯಲ್ಲಿ ಕರೆದೊಯ್ಯುತಾಳೆ. ಆಗ ಒಬ್ಬ ಅರೆಹುಚ್ಚನು (ಸತ್ಯ), ನಾಯಕನಿಗೆ ಆ ಹುಡುಗಿಯ ಸಹವಾಸ ಬಿಡಲು ಗೋಗರೆಯುತ್ತಾನೆ. ಈ ಊರನ್ನು ಬಿಡಲು ನಾಯಕನಿಗೆ ಸೂಚಿಸುತ್ತಾನೆ. ಆಗ ನಾಯಕನಿಗೆ ಆ ಹುಡುಗಿಯ ಬಗ್ಗೆ ಕುತೂಹಲ ಹೆಚ್ಚಾಗಿ ಆ ಹುಡುಗಿ ಯಾರೆಂದು ತಿಳಿದೇ ಹೋಗುವೆನೆಂದು ನಿರ್ಧರಿಸಿಬಿಡುತ್ತಾನೆ. ಅಷ್ಟರಲ್ಲೇ ಬಹಳಷ್ಟು ಪ್ರೇಕ್ಷಕರಿಗೆ ಆ ಹುಡುಗಿ ಯಾರೆಂದು ಊಹಿಸಿಬಿಟ್ಟಿರುತ್ತಾರೆ!

ಹೀಗೇ, ಮೂರು ಹಾಡು, ಅರೆಹುಚ್ಚನ ಇತಿಹಾಸದ ಕೆಲವು ದೃಶ್ಯಗಳು ಮುಂತಾದ ದೃಶ್ಯಾವಳಿಯ ಮೂಲಕ ಚಿತ್ರ ಕೊನೆಯ ೧೫ ನಿಮಿಷಕ್ಕೆ ಬಂದು ನಿಲ್ಲುತ್ತದೆ. ಇಲ್ಲಿಯವರೆಗೆ ಯಾವುದೇ ಬೆಳವಣಿಗೆ ಕಾಣದ ಚಲನ ಚಿತ್ರ ಧಿಡೀರಾಗಿ ೧೦ ನಿಮಿಷದ ಸಂಭಾಷಣೆಯ ಮೂಲಕ ಕೊನೆಗೊಳ್ಳುತ್ತದೆ. ಹುಡುಗಿ, ನಾಯಕನ ವಿರೋಧದ ನಡುವೆಯೂ, ನಾಯಕನ ಕೋಣೆಗೆ ಒಂದು ರಾತ್ರಿ ಬರುತ್ತಾಳೆ. ನಾಯಕ ಭಯಮಿಶ್ರಿತ ಧ್ವನಿಯಲ್ಲಿ ಹುಡುಗಿಯ ಪೂರ್ವಾಪರವನ್ನು ಕೇಳುತ್ತಾನೆ. ಆಗ ಹುಡುಗಿ, ತಾನು ದೇವದಾಸಿಯೆಂದೂ, ಊರಿಗೆ ಪ್ಳೇಗ್ ಮಾರಿ ಹರಡಿದ್ದಾಗ, ತನ್ನಪ್ಪ (ಪಟೇಲ) ತನ್ನನ್ನು ದೇವದಾಸಿಯಾಗಿ ಮಾಡುವೆನೆಂದು ಹರಕೆ ಹೊತ್ತಾಗ ಊರೂ ಉಳಿದು ಮತ್ತು ಊರಿನ ಎಷ್ಟೋ ಜನರು ಬದುಕುಳಿದರೆಂದೂ, ಆದುದರಿಂದ ನಾನು ದೇವದಾಸಿಯಾಗಿ ದೇವರ ಸೇವೆ ಮಾಡುತ್ತಿದ್ದೇನೆ, ಎಂದು ದೇವದಾಸಿ ಪದ್ಧತಿಯ ಬಗ್ಗೆ ಅತೀ ನಂಬಿಗೆ ಮತ್ತು ಗೌರವದಿಂದ ಮಾತನ್ನಾಡುತ್ತಾಳೆ. ಆಗ ನಾಯಕ ಇದು ವೇಶ್ಯೆಗಾರಿಗೆಗೆ ಸಮ, ದೇವರಿಗೆ ಎಂಜಲನ್ನು ಯಾವತ್ತೂ ಅರ್ಪಿಸುವುದಿಲ್ಲ ಎಂಬಿತ್ಯಾದಿಯಾಗಿ ಒಂದು ಪೇವಲ ವಾದವನ್ನು ಮುಂದಿಟ್ಟಾಗ, ಹುಡುಗಿ ಶಬರಿಯನ್ನು ಉದಾಹರಿಸಿ ಶಬರಿ ರಾಮನಿಗೆ ಎಂಜಲನ್ನು ಅರ್ಪಿಸಲಿಲ್ಲವೇ ಎನ್ನುತ್ತಾಳೆ! ಹೀಗೆ ವಾದ ಮುಂದುವರೆದು ನಾಯಕ, ನೀನು ಮಾಡುತ್ತಿರುವುದು ತಪ್ಪು. ಇದು ಮೂಢನಂಬಿಕೆ, ಇದರಲ್ಲಿ ನಿಮ್ಮಪ್ಪನ ಸ್ವಾರ್ಥವೂ ಇದೆ ಎಂದೆಲ್ಲಾ ವಾದಿಸುತ್ತಾನೆ. ಹೊಸ ಬಾಳ್ವೆಯನ್ನು ನಡೆಸುವಂತೆ ಸೂಚಿಸುತ್ತಾನೆ. ಈ ವಾದದಿಂದ ಹುಡುಗಿಗೆ ತನ್ನ ಜೀವನದಲ್ಲಿ ಮೊದಲನೆ ಬಾರಿ ತಾನು ಜೀವಿಸುತ್ತಿರುವ ರೀತಿ ತಪ್ಪೆಂದೆನಿಸುತ್ತದೆ. ಆಗ ನಾಯಕನನ್ನು ತನಗೆ ಬಾಳು ಕೊಡುವಂತೆ ಕೇಳಿಕೊಳ್ಳುತ್ತಾಳೆ. ನಾಯಕ ಮೌನ ತಾಳುತ್ತಾನೆ.

ಮುಂದಿನ ಬೆಳಗ್ಗೆ ನಾಯಕಿಯು ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿರುತ್ತಾಳೆ. ಪೋಲೀಸರಿಗೆ ಇದು ಆತ್ಮಹತ್ಯೆಯೆಂದೆನಿಸುತ್ತದೆ. ನಾಯಕ ಈ ಸಾವಿಗೆ ತಾನೇ ಕಾರನವೆಂಬ ಪಾಪ ಪ್ರಜ್ಞೆ ಕಾಡುತ್ತದೆ.

For those who believe, no explanation is necessary. For those who do not believe, no explanation is possible” ಎಂಬ ಉಕ್ತಿಯೊಂದಿಗೆ ಪ್ರಾರಂಭವಾಗುವ ಚಲನಚಿತ್ರ ಬಿಂಬಿಸಬೇಕಾಗಿದ್ದ ಸಂದೇಶವನ್ನು ತೋರಿಸಲು ಸಫಲವಾಗಿದ್ದರೂ, ಚಲನಚಿತ್ರ ಭಾವನಾತ್ಮಕವಾಗಿ ಯಾವುದೇ ಬೆಳವಣಿಗೆ ಕಾಣದೆ ಒಂದೇ ವಾದದಲ್ಲಿ ಎಲ್ಲವೂ ಮುಗಿದು ಹೋಗುವುದು ಸ್ವಲ್ಪ ಉತ್ಪ್ರೇಕ್ಷೆಯೆನಿಸದೆ ಇರಲಾರದು. ಮಾಸ್ತಿ ಮತ್ತು ಆನಂದರ ಕಥೆಗಳಿಂದ ಸ್ಪೂರ್ಥಿಗೊಂಡು ಸ್ವತಃ ನಿರ್ದೇಶಕರೇ (ಎಂ ಎಸ್ ಸತ್ಯು) ರಚಿಸಿರುವ ಕಥೆಯನ್ನು ತೆರೆಯ ಮೇಲೆ ಪರಿಣಾಮಕಾರಿಯಾಗಿ ತೋರಿಸುವಲ್ಲಿ ವಿಫಲವಾಗಿದ್ದಾರೆ. ಹಾಗೆ ಈ ಕಥೆ ದೇವದಾಸಿ ಎಂಬ ಮೌಢ್ಯ ಪದ್ಧತಿಕ್ಕೆ ಯಾವುದೇ ಪರಿಹಾರ ಸೂಚಿಸುವ ಕಥೆಯೂ ಆಗಿಲ್ಲ! ಮಣಿಕಾಂತ ಕದ್ರಿಯವರ ಸಂಗೀತ ಮಧುರವಾಗಿದೆ. ಪಲ್ಲವಿ ಹಾಡಿರುವ ಒಂದು ಹಾಡು “ಎಲೆ ಮೇಲೆ ಎಳೆ ಬಿಸಿಲೆ, ಮುಂಜಾವಿನ ಹೊಸ ಸೆಲೆ, ಕಾಣದಿನಿಯನ” ಹಾಡಿನ ಸಾಹಿತ್ಯವೂ ಸೊಗಸಾಗಿದೆ. ಗೀತೆಗಳಿಗೆ ಸುಧೀರ್ ಅತ್ತಾವರ್ ರವರ ಸಾಹಿತ್ಯ. ಚಿತ್ರದ ಮೊದಲಿಗ ಬರುವ ಮಯೂರಿ ಉಪಾಧ್ಯರವರ ನೃತ್ಯ ಸಂಯೋಜನೆ ವಿಶಿಷ್ಟವಾಗಿದೆ.ನಟನೆಯಲ್ಲಿ ಮಿಂಚಿರುವುದು ಅರೆ ಹುಚ್ಚನ ಪಾರ್ತದಲ್ಲಿ ಸತ್ಯು. ಅನಿರುದ್ಧ ಎಂದಿನಂತೆ ಪರವಾಗಿಲ್ಲ. ನಾಯಕಿಯ ನಟನೆ ಚೆನ್ನಾಗಿದ್ದರೂ, ತಾವೇ ಸಂಭಾಷಣೆ ಹೇಳಿರುವುದರಿಂದ ಮಾತುಗಳು, ಉಚ್ಛಾರಣೆ ಸ್ಪಷ್ಟವಾಗಿಲ್ಲ! ಶೈಲಜಾರವರ ಸಂಭಾಷಣೆಯಿದೆ ಚಿತ್ರಕ್ಕೆ. ಜಿ ಎಸ್ ಭಾಸ್ಕರ್ ರವರ ಛಾಯಾಗ್ರಹಣ ಚೆನ್ನಾಗಿದೆ. ಸಾಕಷ್ಟು ದಿನಗಳ ನಂತರ ರಾಮಕೃಷ್ಣ ರವರ (ಕಡಿಮೆ ಸೀಮಿತ ಅವಧಿಯ ಪಾತ್ರದಲ್ಲಿ) ನಟನೆಯನ್ನು ನೋಡಬಹುದು.



ಪ್ರತಿಕ್ರಿಯಿಸಿ