ವಸಂತ ಬಂದ ಋತುಗಳ ರಾಜ
ಬೇಸಿಗೆ ಬಂತೆಂದರೆ ಯುಗಾದಿ ಹಬ್ಬದ ಸಡಗರ, ಮಕ್ಕಳಿಗೆ, ಹೆತ್ತವರಿಗೆ ಪರೇಕ್ಷೇಯ ಒತ್ತಡ, ಪರೀಕ್ಷೆಯ ನಂತರ ರಜಾದಿನಗಳ ಸುಗ್ಗಿ, ಹವಾನಿಯಂತ್ರಣ ಇಲ್ಲದ ಕಡೆ ಕೆಲಸ ಮಾಡುವವರಿಗೆ ಬೇಸಿಗೆಯ ಸೆಖೆ, ಧಗೆ, ಮರಗಳಿಗೆ ಹಳೆ ಎಲೆಗಳನ್ನುದುರಿಸಿ ಚಿಗುರೊಡೆಯುವ ಹೊಸತನ ಹೀಗೆ ಈ ವಸಂತ ಋತು ಒಂದು ರೀತಿಯ ಯಾತನೆ – ಉಲ್ಲಾಸ ಒಟ್ಟೊಟ್ಟಿಗೆ. ಪರಿಸರ ಪ್ರೇಮಿಗಳು ಕವಿಗಳಿಗಂತೂ ಈ ಋತು ಒಂದು ಅದ್ಭುತವೇ ಸರಿ. ಈ ವಸಂತ ಋತುವನ್ನು ಕೆಲವು ಛಾಯಾಚಿತ್ರಗಳೊಂದಿಗೆ, ಕೆಲವು ಖ್ಯಾತ ಕವಿಗಳ ಕವಿತೆಗಳ ತುಣುಕುಗಳನ್ನು ಆಹ್ವಾದಿಸುವುದರೊಂದಿಗೆ ಅನುಭವಿಸೋಣ.

ವಸಂತ ಎಂದೊಡನೆ ಮೊದಲು ನೆನಪಿಗೆ ಬರುವುದು ಕನ್ನಡದ ಆಚಾರ್ಯ “ಬಿ ಎಂ ಶ್ರೀ” ಯವರ ಅನುವಾದಿತ ಕವಿತೆ

ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ,
ಚಳಿಯನು ಕೊಂದ ಹಕ್ಕಿಗಳುಲಿಗಳೆ ಚೆಂದ,
ಕೂವೂ, ಜಗ್ ಜಗ್, ಪುವ್ವೀ, ಟೂವಿಟ್ಟವೂ !
ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
ಇನಿಯರ ಬೇಟ; ಬನದಲಿ ಬೆಳದಿಂಗಳೂಟ,
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಠ,
ಕೂವೂ, ಜಗ್ ಜಗ್, ಪುವ್ವೀ, ಟೂವಿಟ್ಟವೂ !
ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು,
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು,
ಕೂವೂ, ಜಗ್ ಜಗ್, ಪುವ್ವೀ ಟೂವಿಟ್ಟವೂ !
ಬಂದ ವಸಂತ– ನಮ್ಮಾ
ರಾಜ ವಸಂತ !
ಇನ್ನು ವರಕವಿ ಬೇಂದ್ರೆಯವರ ಈ ಕವಿತೆ ಯುಗ ಯುಗಾದಿ ಕಳೆದರೂ ಹೊಸತು ಹೊಸತಾಗಿ ಕೇಳಿಸುತ್ತದೆ. ಬಹುಷಃ ಕನ್ನಡ ನುಡಿ ಇರುವವರೆಗೂ ಹಳೆಯದಾಗದ ಕವಿತೆಯಿದು..

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಳಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ
ಪ್ರೇಮ ಕವಿ ಕೆ ಎಸ್ ನರಸಿಂಹಸ್ವಾಮಿಯವರ ವಸಂತವನ್ನು ಬರಮಾಡಿಕೊಂಡಿದ್ದು ಹೀಗೆ

ಪರಿಮಳದ ತಂಗಾಳಿ ಹರಿದಾಡಿತು;
ದುಂಬಿಗಳ ಸಂಗೀತ ಮೊದಲಾಯಿತು:
ಬಿರಿದರಳ ಬಣ್ಣಗಳ ಹೊಳೆ ಹರಿಯಿತು;
ಚೈತ್ರ, ವೈಶಾಖ-ವಸಂತ ಋತು.
ಲಕ್ಷ್ಮಿನಾರಯಣ ಭಟ್ಟರು ವಸಂತವನ್ನು ಹೊಸತನದ ಹರಿಕಾರ ಎಂದು ಬಣ್ಣಿಸುತ್ತಾರೆ
ಬಾರೋ ವಸಂತ ಬಾರೂ…..
ಹೊಸ ಹೊಸ ಹರುಷದ ಹರಿಕಾರ…
ಹೊಸ ಭಾವನೆಗಳ, ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ…





hai,
photos are really very nice.