ಪುಸ್ತಕೋದ್ಯಮದ ಪ್ರಥಮ ಅನುಭವ
ಭವ್ಯ ಪ್ರವೇಶ ದ್ವಾರ, ಭವ್ಯ ವೇದಿಕೆ. ವೇದಿಕೆಯ ಎಡ ಮತ್ತು ಬಲ ಬದಿಗಳಿಗೆ ಪುಸ್ತಕ ಮಳಿಗೆಗಳು. ಅವುಗಳು ಕೂಡ ಭವ್ಯತೆಯನ್ನು ಮೆರೆಯುತ್ತವೇನೋ ಎಂಬ ಆಶಾವಾದದೊಂದಿಗೆ ನಮ್ಮ ಮಳಿಗೆಯನ್ನು ಹುಡುಕಿ ನೋಡಿದಾಗ ಆದದ್ದು ನಿರಾಸೆ. ದುರ್ಗೆಯ ಸಮ್ಮೇಳನದಲ್ಲಿ ಮಳಿಗೆಗಳಲ್ಲಿ ಪುಸ್ತಕಗಳು ಧೂಳು ತಿಂದಿದ್ದ ಕಥೆ ವ್ಯಥೆ ಇನ್ನೂ ಕ ಸಾ ಪ ಅಧ್ಯಕ್ಷರಿಗೆ ಮನದಟ್ಟಾದಂತೆ ಕಾಣುತ್ತಿಲ್ಲ. ಕಳೆದ ಸರತಿಗಿಂತ ಈ ಬಾರಿ, ಒಂದೇ ಉತ್ತಮ ಬೆಳವಣಿಗೆಯೆಂದರೆ ಮಳಿಗೆಯ ಒಳ ಭಾಗದಲ್ಲಿ ಮಾತ್ರ ಕೆಳಗೆ ಕಾರ್ಪೆಟ್ ಹಾಸಲಾಗಿತ್ತು. ಆದರೆ ಮಳಿಗೆಗಳ ಮಧ್ಯದ ರಸ್ತೆಯಲ್ಲಿನ ಧೂಳೇ ಸಾಕಾಗಿತ್ತು ಪುಸ್ತಕಗಳ ಬಹಿರಂಗದ ಚಂದವನ್ನು ಹಾಳುಗೆಡವಲಿಕ್ಕೆ. ಪುಸ್ತಕಗಳನ್ನು ಪ್ರದರ್ಶಿಸಲಿಕ್ಕೆ ಕೊಟ್ಟ ಊಟದ ಮೇಜಿನ ಮೇಲಿನ ಜಿಡ್ಡುಗಳನ್ನು ಉಜ್ಜಿ ತೊಳೆಯುವುದಕ್ಕೆ ಒಂದು ವರ್ಷವಾದರೂ ಬೇಕಾದೀತೇನೋ! ಮನೆಯಿಂದ ನಾವು ಹೊದೆಯಲು ತಂದಿದ್ದ ಹೊದಿಕೆಗಳನ್ನೇ ಮೇಜಿಗೆ ಹೊದಿಸಿದ್ದಯಿತು. ಆರು ಮೇಜುಗಳಿಗೆ ಮೂರು ದಿನಕ್ಕೆ ೯೦೦ ರೂ ಗಳನ್ನು ತೆತ್ತು ಬಾಡಿಗೆಗೆ ತೆಗೆದುಕೊಂಡು, ಪುಸ್ತಕಗಳ ಪ್ರದರ್ಶನಕ್ಕೆ ನಮ್ಮ ಮಳಿಗೆ ಸಜ್ಜಾದಾಗ ಬೆಳಗ್ಗೆ ೩ ಘಂಟೆ.

ಮೊದಲನೇ ದಿನ ಬಹಳಷ್ಟು ಜನ ಮಳಿಗೆಗೆ ಲಗ್ಗೆಯಿಟ್ಟರು. ಆದರೂ ಕೊಳ್ಳುವುದಕ್ಕೆ ಅಷ್ಟೇನೂ ಉತ್ಸಾಹ ತೋರಲಿಲ್ಲ. ಉರಿ ಬಿಸಿಲಿನಲ್ಲಿ ಪುಸ್ತಕಗಳನ್ನು ಇನ್ನೂ ಮೂರು ದಿನ ಹೊತ್ತಾಡುವುದು ಕಷ್ಟವೆಂಬುದು ಬಹುತೇಕ ಎಲ್ಲರ ವಾದವಾಗಿತ್ತು. ಮೊದಲ ದಿನದ ಮಾರಾಟ ನಿರೀಕ್ಷೆಯಂತೆ ಅಭೂತಪೂರ್ವವಾಗೇನೂ ಇರದೆ, ನೀರಸವೂ ಆಗಿರದೆ ಸಾಧಾರಣ ಎನ್ನುವಂತಿತ್ತು. ಎರಡನೇ ಮತ್ತು ಮೂರನೇ ದಿನದ ಪ್ರತಿಕ್ರಿಯೆ ಉತ್ತಮವಾಗಿತ್ತು. ನಮ್ಮ ನಿರೀಕ್ಷೆಯನ್ನು ಮೀರಿ ಪುಸ್ತಗಳು ಖಾಲಿಯಾದವು.

ಪುಸ್ತಕ ಮಾರಾಟದ ಕೆಲವು ಮುಖ್ಯಾಂಶಗಳು..
* ಹೆಚ್ಚು ಜನ ಕೇಳಿದ್ದು ಕೊಂಡದ್ದು ಸಮ್ಮೇಳನಾಧ್ಯೆಕ್ಷೆ ಗೀತಾ ನಾಗಭೂಷಣ್ ರವರ ಪುಸ್ತಕಗಳನ್ನೇ. ಅದರಲ್ಲೂ ಅವರ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ವಿಜೇತ ಕೃತಿ “ಬದುಕು” ಮಾರಾಟದಲ್ಲಿ ಉತ್ತಮ ಪ್ರತಿಕ್ರಿಯೆ ತೋರಿಸಿತು.
* ಭೈರಪ್ಪನವರ ಪುಸ್ತಕಗಳ ದರಗಳನ್ನು ನೋಡಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟಿದ್ದೇ. ಆ ಪುಸ್ತಕಗಳ ಪ್ರಕಾಶಕರ ಧೋರಣೆಯಿಂದ ಭೈರಪ್ಪನವರ ಪುಸ್ತಕಗಳಿಗೆ ನಾವು ೧೦% ಕ್ಕಿಂತಲೂ ಹೆಚ್ಚು ರಿಯಾಯಿತಿ ಕೊಡಲಾಗುವುದಿಲ್ಲ. ಕೊಳ್ಳುವವರಿಗೆ ೧೦% ರಿಯಾಯಿತಿಯಿಂದಲೂ ಆ ಪುಸ್ತಕಗಳನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ.
* ಪ್ರತಾಪ್ ಸಿಂಹ ಮತ್ತು ಹರೀಶ್, ಜಿನ್ನಾ ಮೇಲೆ ಬರೆದ ಪುಸ್ತಕಗಳು ಸಮ್ಮೇಳನ ಉದ್ಘಾಟನೆಯ ಹಿಂದಿನ ದಿನವೇ ಖಾಲಿ. ಯಾವುದೇ ಒಬ್ಬ ವ್ಯಕ್ತಿ ಅಥವಾ ಪುಸ್ತಕ ವಿವಾದಕ್ಕೊಳಗಾದರೆ ಅದರ ಮಾರುಕಟ್ಟೆ ಬೇಡಿಕೆ ಹೇಗೆ ಹೆಚ್ಚಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ.
* ಕುಮಾರವ್ಯಾಸ ಭಾರತಕ್ಕೆ ಎಲ್ಲಿಲ್ಲದ ಬೇಡಿಕೆ. ಎಲ್ ಗುಂಡಪ್ಪನವರ ಕುಮಾರವ್ಯಾಸ ಭಾರತದ ಗದ್ಯಾನುವಾದ ಪುಸ್ತಕಗಳೂ ಖಾಲಿ. ೧೮೦೦ ರೂ ಮುಖಬೆಲೆಯ ಆ ರಾ ಸೇತುರಾಮರಾವ್ ರವರ ಕುಮಾರವ್ಯಾಸ ಭಾರತದ ಟೀಕಾ, ತಾತ್ಪರ್ಯ ಸಹಿತ ಅರ್ಥ ವಿವರಣೆಯ ಪುಸ್ತಕಗಳೂ ಎರಡನೆಯ ದಿನವೇ ಖಾಲಿ. ಈ ಪುಸ್ತಕಗಳಿಗೆ ನಮ್ಮ ಮಳಿಗೆಯಿಂದ ೨೦% ವಿಶೇಷ ರಿಯಾಯಿತಿಯಿತ್ತು. ಮೂರನೇ ದಿನ ಈ ಪುಸ್ತಕಗಳಿಗೆ ಬೇಡಿಕೆಯಿತ್ತವರಿಗೆ, ನಾವು ಅಂಚೆ ಮುಖಾಂತರ ಕಳಿಸಿಕೊಡುವೆವು ಎಂಬ ಭರವಸೆಯಷ್ಟೇ ಸಿಕ್ಕಿದ್ದು.
* ಕಾರಂತರ ಮೂಕಜ್ಜಿಯ ಕನಸುಗಳು, ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಶ್ರೀಕಾಂತರ ಮಂಕುತಿಮ್ಮನ ಕಗ್ಗದ ತಾತ್ಪರ್ಯ, ತ ರಾ ಸು ರವರ ದುರ್ಗಾಸ್ತಮಾನ, ಅ ನ ಕೃ ರವರ ಸಂಧ್ಯಾರಾಗ ಪುಸ್ತಕಗಳಿಗೆ ಅಪಾರವಾದ ಬೇಡಿಕೆ. ಪುಸ್ತಕಗಳೆಲ್ಲಾ ಎರಡನೇ ದಿನವೇ ಖಾಲಿ.
* ಕೆ. ಎ. ಎಸ್ ಪರೀಕ್ಷೆಯ ಪಠ್ಯಸೂಚಿಯ ಪುಸ್ತಕಗಳಿಗೆ ಅಪಾರ ಬೇಡಿಕೆ. ಎಲ್ ಎಸ್ ಶೇಶಗಿರಿರಾವ್ ರವರ ಹೊಸಗನ್ನಡ ಸಾಹಿತ್ಯ ಚರಿತ್ರೆ, ಜೆ ಎಸ್ ಶಿವರುದ್ರಪ್ಪನವರ ಕಾವ್ಯಾರ್ಥ ಪದಕೋಶ, ಕೀರ್ತಿನಾಥ ಕರ್ತುಕೋಟಿಯವರ ಸಾಹಿತ್ಯ ಸಂಗಾತಿ, ಇತ್ಯಾದಿ ಪುಸ್ತಕಗಳು ಭರದಿಂದ ಮಾರಾಟ,
* ಸದ್ಯಕ್ಕೆ ಅಚ್ಚಿನಲ್ಲಿ ಇರದ ಕುವೆಂಪುರವರ ಶ್ರೀರಾಮಾಯಣದರ್ಶನಂ ಸಿಗದೆ ಇರುವುದು ಬಹಳ ಮಂದಿಗೆ ಬೇಸರ ತರಿಸಿತು.
* ರಾಮಾಯಣದ ಪುಸ್ತಕಗಳಿಗಿಂತ ಮಹಾಭಾರತದ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ. ಪರ್ವಕ್ಕೂ ಅತಿ ಹೆಚ್ಚು ಬೇಡಿಕೆ.
* ಖರ್ಚಾಗದ ಪಾಕಶಾಸ್ತ್ರದ ಪುಸ್ತಕಗಳು.
* ಮಹಿಳಾ ಸಾಹಿತಿಗಳ(ಸುಧಾ ಮೂರ್ತಿ, ಎಂ ಕೆ ಇಂದಿರಾ, ಸಾಯಿಸುತೆ, ಉಷಾ ನವರತ್ನರಾವ್) ಪುಸ್ತಗಳಿಗೆ ಬೇಡಿಕೆ ಕಡಿಮೆ.
* ಮಾಸ್ತಿ, ಅ ನ ಕೃ ಪುಸ್ತಕಗಳು ಅಷ್ಟೇನೂ ಭರದ ಮಾರಾಟ ಕಾಣಲಿಲ್ಲ.
* ಬೀchi ಪುಸ್ತಗಳು ತಡವಾದರೂ, ಖಾಲಿ.
* ರವಿ ಬೆಳೆಗೆರೆ, ವಿಶ್ವೇಶ್ವರ ಭಟ್ಟ, ಪ್ರತಾಪ್ ಸಿಂಹ, ಜಯಂತ ಕಾಯ್ಕಿಣಿ, ಗಿರೀಶ್ ಕಾರ್ನಾಡ್ ಪುಸ್ತಕಗಳಿಗೆ ಸಾಧಾರಣ ಪ್ರತಿಕ್ರಿಯೆ.
* ಧಾರ್ಮಿಕ, ಅಧ್ಯಾತ್ಮಿಕ ಪುಸ್ತಗಳು ಆಷ್ಟೇನೂ ಮಾರಾಟ ಕಾಣಲಿಲ್ಲ.
* ವಸುಧೇಂದ್ರ ಮತ್ತು ತೇಜಸ್ವಿಯವರ ಪುಸ್ತಕಗಳು ಸೆಟ್‌ಗಳಲ್ಲೇ ಖಾಲಿಯಾದದ್ದು ವಿಶೇಷ.
* ರಾವ್ ಬಹದ್ದೂರ್ ರವರ ಗ್ರಾಮಾಯಣ, ಖಾಂಡ್ರೇಕರ್ ರವರ ಯಾಯಾತಿ (ಇನಾಂದಾರ್ ರವರ ಅನುವಾದ) ಕೂಡ ಭರದ ಮಾರಾಟ.
* ಜೆ ಪಿ ರಾಜರತ್ನಂ ರವರ ಮಕ್ಕಳ ಪುಸ್ತಕಕ್ಕೆ ಒಳ್ಳೆಯ ಬೇಡಿಕೆ.
ಬಿಜಾಪುರದ ಒಬ್ಬ ಪ್ರಾಥಮಿಕ ತರಗತಿಯ ಶಿಕ್ಷಕ(ಶಂಕರಲಿಂಗ್ ಬಿ ಹಿಪ್ಪರಗಿ) ಮೂರು ನಾಲ್ಕು ಚೀಲಗಳ ತುಂಬಾ ಪುಸ್ತಕಗಳನ್ನು ಕೊಂಡು ಹೋದದ್ದು ಬಹಳ ಸಂತಸ ತರಿಸಿತು. ಆರ್ಥಿಕ ಸಮೃದ್ಧಿ ಮಾತ್ರ ಪುಸ್ತಕಗಳನ್ನು ಕೊಳ್ಳಲು ಪ್ರೇರೇಪಿಸುತ್ತದೆ ಎಂಬುವವರ ವಾದಕ್ಕೆ ಅವರು ಅಪವಾದ. ಅವರ ಓದು ಕೂಡ ಬಹಳ ವೈವಿಧ್ಯ. ಕನ್ನಡದ ಶಾಸ್ತ್ರೀಯ (classics) ಪುಸ್ತಕಗಳಿಂದ ಹಿಡಿದು, ರಶ್ಯನ್ ಸಾಹಿತ್ಯ, ಬೆಂಗಾಳಿ, ತಮಿಳು ತೆಲುಗು ಪುಸ್ತಕಗಳ ಅನುವಾವದವೆಲ್ಲಾ ಅವರ ಚೀಲ ತುಂಬಿತ್ತು. ಅವರ ಭೇಟಿಯಿಂದ ನಾನು ಬಹಳ ಆನಂದ ಪಟ್ಟೆ.




ಪುಸ್ತಕೋದ್ಯಮದ ಪ್ರಥಮ ಪ್ರಯೋಗ ಯಶಸ್ವಿಯಾದಂತಿದೆ. ಇನ್ನಷ್ಟು ಲೇಖನಗಳು ನಿನ್ನ ಪುಸ್ತಕೋದ್ಯಮ ಅನುಭವಗಳ ಮೇಲೆ ಬರಲಿ.
ನಮಸ್ಕಾರ.. ಪ್ರಥಮ ಪ್ರಯತ್ನ ಯಶಸ್ವಿ ಆಗಲೆಂದ ಹಾರೈಕೆ..
ಈ ಪುಸ್ತಕ ಪ್ರದರ್ಶನ ಉದ್ಯಮದ ಬಗ್ಗೆ ಉತ್ತಮ ಮಾಹಿತಿ, ಜನರ ಸದ್ಯದ ಅಭಿರುಚಿಯನ್ನು ಅರ್ಥ ಮಾದಿಕೊಳ್ಳುವಲ್ಲಿ
ಸಹಕಾರಿ ಆಯಿತು ಅನಿಸ್ತದೆ.
ರವೀಶ, ನಿತಿನ,
ಧನ್ಯವಾದಗಳು…