ಪುಸ್ತಕ ಓದುವ ಸಂಸ್ಕೃತಿ ಬೆಳೆಸಿ
“ರಾಬರ್ಟ್ ಸತೇ” ಎಂಬ ಆಂಗ್ಲ ಕವಿ, “ನನ್ನ ಅವಿರತ ಗೆಳೆಯರ‍್ಯಾರೆಂದರೆ, ಯಾರ ಜೊತೆ ನಾನು ನಿರಂತರ ಸಂಭಾಷಣೆ ನಡೆಸುತ್ತೇನೋ ಅವರೇ” ಎನ್ನುತ್ತಾನೆ. (My never-failing friends are they, With whom I converse day by day). ಇದರ ಬಗ್ಗೆ ಒಮ್ಮೆ ಅಲೋಚಿಸಿದಾಗ, ನಾವು ನಿರಂತರ ಸಂಭಾಷಣೆ ನಡೆಸುವುದು ಯಾರೊಂದಿಗೆ ಎಂದು ತಿಳಿಯಲು ನಿಮಗೆ ಓದುವ ಹವ್ಯಾಸವಿದ್ದಲ್ಲಿ ಕಷ್ಟವಾಗುವುದಿಲ್ಲ. ಹೌದು ಪುಸ್ತಕಗಳೇ ನಮ್ಮ ನಿರಂತರ ಸಂಗಾತಿಗಳಲ್ಲವೇ? ಹೆಚ್ಚಿನ ಸಮಯ ನಾವು ನಮ್ಮ ಅಳಲು ತೋಡಿಕೊಳ್ಳುವುದು, ಕೆಲವೊಮ್ಮೆ ನಮ್ಮನ್ನು ಗುರುತಿಸಿಕೊಳ್ಳುವುದು, ನಲಿದಾಡುವುದು, ಒಪ್ಪದ ವಿಚಾರಧಾರೆಯೊಂದಿಗೆ ಚರ್ಚಿಸುವುದು, ಜಗಳವಾಡುವುದು, ಬೇಸರಿಸಿಕೊಳ್ಳುವುದು ಇವೆಲ್ಲ ಅನುಭವ ಪುಸ್ತಕಗಳೊಂದಿಗೆ ಒಮ್ಮೆಯಾದರೂ ಗುರುತಿಸಿಕೊಳ್ಳುತ್ತೇವಲ್ಲವೇ?

ಇತ್ತೀಚೆಗೆ ನಡೆದ ಪುಸ್ತಕೋತ್ಸವಗಳತ್ತ ಒಮ್ಮೆ ಗಮನ ಹರಿಸಿದರೆ, ಪುಸ್ತಕ ಓದುವ ಹವ್ಯಾಸ ಸಮಾಜದಲ್ಲಿ ಹೆಚ್ಚುತ್ತಾ ಹೋಗುತ್ತಿರುವುದನ್ನು ಗಮನಿಸಬಹುದು. ಆರ್ಥಿಕ ಸಮೃದ್ಧತೆಯೂ ಇದಕ್ಕೆ ಒಂದು ಕಾರಣ. ಹಿಂದೆ ರಾಜರತ್ನಂ, ಗಳಗನಾಥ ಮುಂತಾದ ಖ್ಯಾತ ಸಾಹಿತಿಗಳು ಚೀಲದಲ್ಲಿ ಪುಸ್ತಕಗಳನ್ನು ತುಂಬಿ ಮನೆಮನೆಗೆ ಹೋಗಿ ಪುಸ್ತಕಗಳ ವಿಚಾರ ತಿಳಿಸಿ ಪುಸ್ತಕಗಳನ್ನು ಮಾರಿ, ಓದುವ ಸಂಸ್ಕೃತಿ ಬೆಳೆಸಿದರು ಎನ್ನುವ ಕಥೆಗಳನ್ನು ಬಹಳ ಕೇಳಿದ್ದೇವೆ. ಈಗಲೂ ಪುಸ್ತಗಳನ್ನು ಮನೆಮನೆಗೆ ತಲುಪಿಸುವ ಸೌಕರ್ಯ ಬಹಳಷ್ಟಿದೆ. ಆದರೆ ಪುಸ್ತಕ ವಿಚಾರಗಳನ್ನು ತಿಳಿಸುವವರ ಕೊರತೆ ಇದೆಯೆಂದೆನಿಸುತ್ತಿದೆ. ಪುಸ್ತಕ ಮಾರಾಟಗಾರರಿಗೆ, ಪುಸ್ತಕಗಳನ್ನು ಜೋಡಿಸಿ ಇಡುವುದೇ ದೊಡ್ಡ ಸಾಧನೆ. ಇನ್ನು ಕೆಲವು ಪ್ರಕಾಶಕರಂತೂ ಗ್ರಂಥಾಲಯಗಳ ಸಲುವಾಗಿಯೇ ಪುಸ್ತಕಗಳನ್ನು ಪ್ರಕಟಿಸುತ್ತಾರೇನೋ ಎಂಬ ಸಂಶಯ ಬರದೆ ಇರಲಾರದು. ಇಂತಹ ಸಂದರ್ಭದಲ್ಲಿ ಓದುಗರ ಮತ್ತು ಪುಸ್ತಕಗಳ ವಿಚಾರದ ನಡುವಿನ ಕಂದಕವನ್ನು ಸ್ವಲ್ಪ ಮಟ್ಟದಲ್ಲಿ ಮುಚ್ಚುತ್ತಿರುವುದು ಗಣಕಯಂತ್ರವೇ. ಗಣಕಯಂತ್ರದ ಹಾವಳಿಯಿಂದ ಓದುವ ಸಂಸ್ಕೃತಿ ನಶಿಸಿ ಹೋಗಬಹುದೆಂದು ಸಂದೇಹದಲ್ಲಿ ಹುರುಳಿಲ್ಲ ಎಂಬುದು ಒಮ್ಮೆ ಅಂತರ್ಜಾಲದಲ್ಲಿ ಆಗುವ ಬರವಣಿಗೆಯ ವಿಚಾರ ವ್ಯಾಪ್ತಿಯಿಂದಲೇ ತಿಳಿಯುತ್ತದೆ.
ಅಂತರ್ಜಾಲದಲ್ಲಾಗುವ ಬೃಹತ್ ಬರವಣಿಗೆ, ಅವುಗಳು ಪುಸ್ತಕ ರೂಪದಲ್ಲಿ ಅಚ್ಚಾಗುವುದು ಎಲ್ಲವೂ ಒಳ್ಳೆಯ ಬೆಳವಣಿಗೆಯಾದರೂ, ಕನ್ನಡದಲ್ಲಿ ಉತ್ಕೄಷ್ಟ ಮಟ್ಟದ ಬರವಣಿಗೆ ಕಡಿಮೆಯಾಯಿತೇ ಎಂಬ ಸಂದೇಹ ಉಳಿದೇ ಇದೆ. ಕಾರಂತ, ಅನಕೃ ರವರಂತಹ ದೈತ್ಯ ಕಾದಂಬರಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಏಕೆ ಕಂಡು ಬರುತ್ತಿಲ್ಲ? ಬೇಂದ್ರೆ, ಕುವೆಂಪು ರವರಂತಹ ಕವಿಗಳು? ಕೈಲಾಸಂ ನಂತಹ ಹಾಸ್ಯ ನಾಟಕಗಾರರು? ಡಿವಿಜಿ ಯವರಂತೆ ಮತ್ತೊಂದು ಕಗ್ಗವನ್ನು ಯಾರಾದರೂ ಸೃಷ್ಟಿಸಬಲ್ಲರೇ? (ಇವುಗಳು ಕೆಲವೇ ಉದಾಹರಣೆಗಳಷ್ಟೇ). ಅಥವಾ ಒಳ್ಳೆಯ ಪುಸ್ತಕಗಳು ಬರುತ್ತಿವೆ, ನಮ್ಮ ಓದುವ ಆಯ್ಕೆಯೇ ಸರಿಯಿಲ್ಲವೇ?
ಇಂತಹ ಸಂದೇಹಗಳ ನಿವಾರಣೆಗೆ ಒಂದೇ ಪರಿಹಾರ – ಸಮಗ್ರ ಓದು. ಸಿಕ್ಕಿದ್ದನು ಓದುವುದು. ಓದುವ ತೆವಲು ಬೆಳೆಸಿಕೊಳ್ಳುವುದು. ಹಿಂದಿನ ದೈತ್ಯ ಸಾಹಿತಿಗಳ ಎಲ್ಲ ಕೃತಿಗಳಿಂದ ಹಿಡಿದೂ ಹೊಸ ಬರಹಗಾರರವರೆಗೆ ಎಲ್ಲವನ್ನೂ ಓದುವುದು. ನಮ್ಮ ಪರ, ವಿರೋಧ ವಿಚಾರಧಾರೆಯನ್ನೂ ಓದುವುದು. ನಮ್ಮ ಇಷ್ಟದ ಪ್ರಾಕಾರದ ಸಾಹಿತ್ಯ, ಇಷ್ಟವಲ್ಲದ ಹೆಚ್ಚು ತಿಳಿಯದ ಪ್ರಾಕಾರಗಳನ್ನೂ ಓದುವುದು.
ಈ ನಿಟ್ಟಿನಲ್ಲಿ ಪುಸ್ತಕೋತ್ಸವಗಳು ನಮಗೆ ತಿಳಿದ, ತಿಳಿಯದ ಪುಸ್ತಕಗಳ ಪರಿಚಯಕ್ಕೆ ಉತ್ತಮ ವೇದಿಕೆಯಾಗಬಲ್ಲವು. ಅಪಾರ ಸಂಖ್ಯೆಯ ಮಳಿಗೆಗಳು, ಮಳಿಗೆಗಳ ಸ್ಥಾಪಕರ ಅಭಿರುಚಿಗೆ(ವ್ಯವಹಾರಕ್ಕೆ?) ತಕ್ಕಂತಹ ವಿಭಿನ್ನ ರೀತಿಯ ಪುಸ್ತಕಗಳು ದೊರೆಯುವ ವೇದಿಕೆ ಇದೊಂದೇ. ಇನ್ಮುಂದೆ ಯಾವುದೇ ಪುಸ್ತಕೋತ್ಸವಗಳನ್ನು ತಪ್ಪಿಸಿಕೊಳ್ಳಬೇಡಿ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ, ಮೈಸೂರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ನಡೆಸಿದ ಪುಸ್ತಕ ಪ್ರದರ್ಶನಗಳು ಅಭೂತಪೂರ್ವ ಯಶಸ್ಸು ಕಂಡಿವೆ. ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆಯೇ ಪುಸ್ತಕ ಮೇಳ. ತಪ್ಪದೇ ಭೇಟಿ ಕೊಡಿ. ಮೈಸೂರಿನಲ್ಲಿ ಮುಂದಿನ ತಿಂಗಳು ರಾಷ್ಟ್ರೀಯ ಪುಸ್ತಕ ಮೇಳವನ್ನು ಆಯೋಜಿಸುವ ಮಾತುಕತೆ ಪ್ರಗತಿಯಲ್ಲಿದೆಯಂತೆ. ನವೆಂಬರ್ ನಲ್ಲಂತೂ ನಮ್ಮ ಆಪ್ತ ಬೆಂಗಳೂರು ಪುಸ್ತಕೋತ್ಸವ ಬಂದೇ ಬರುತ್ತದೆ. ಉಳಿದಂತೆ ಬೆಂಗಳೂರಿನಲ್ಲಿ ಪುಸ್ತಕ ಮಳಿಗೆಗಳಿಗೇನೂ ಕಡಿಮೆಯಿಲ್ಲ!
ಪುಸ್ತಕ ಓದುವ ಸಂಸ್ಕೃತಿಯನ್ನು ಉಳಿಸಿ. ಉತ್ತಮ ಪುಸ್ತಕಗಳನ್ನು ಹೊರತರಲು ನಾವು ನೀವು ಮಾಡಬಹುದಾದ ಸಹಾಯ ಹೆಚ್ಚು ಹೆಚ್ಚು ಓದುವುದು.




ನಿಮ್ಮ ಲೇಖನ ಅರ್ಥಪೂರ್ಣ,ಸಕಾಲಿಕ!
ಭಟ್ ಸಾರ್.. ಧನ್ಯವಾದಗಳು..