ಜೈಪುರ ಸಾಹಿತ್ಯೋತ್ಸವದ ಒಂದು ಸಣ್ಣ ವರದಿ | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಜೈಪುರ ಸಾಹಿತ್ಯೋತ್ಸವದ ಒಂದು ಸಣ್ಣ ವರದಿ

ಜನವರಿ ೨೧ರಿಂದ ೨೫ ರ ವರೆಗೆ ಜರುಗಿದ ಜೈಪುರ ಸಾಹಿತ್ಯೋತ್ಸವ ಒಂದು ಅದ್ಭುತ ಅನುಭವ. ಹವಾಮಾನ ವೈಪರೀತ್ಯದಿಂದ ಮೊದಲ ದಿನದ ಕಾರ್ಯಕ್ರಮದಲ್ಲಿ ಸ್ವಲ್ಪ ಅಸ್ಥವ್ಯಸ್ಥವಿದ್ದರೂ, ಅಚ್ಚುಕಟ್ಟಾಗಿ ಜರುಗಿದ ಕಾರ್ಯಕ್ರಮ ಶ್ಲಾಘನೀಯ.

ಐದು ದಿನ ನಡೆದ ಈ ಉತ್ಸವದಲ್ಲಿ, ನಾಲ್ಕು ವೇದಿಕೆಗಳಲ್ಲಿ ಸಮಾನಾಂತರವಾಗಿ ೪ ಘೋಷ್ಟಿಗಳು ನಡೆದವು. ಪ್ರತಿಯೊಂದು ಘೋಷ್ಟಿಗೂ ೧ ಘಂಟೆಯ ಸಮಯ ನಿಗದಿಯಾಗಿತ್ತು. ಸುಮಾರು ೪೫ ನಿಮಿಷಗಳ ಚರ್ಚೆ ನಂತರ ೧೫ ನಿಮಿಷಗಳು ಶ್ರೋತೃಗಳ ಜೊತೆ ಸಂವಾದ. ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳು ಪ್ರಾರಂಭವಾದದ್ದು ಮತ್ತು ನಿಗದಿತ ಸಮಯಕ್ಕೆ ಮುಕ್ತಾಯವಾದದ್ದು ಪ್ರಶಂಸನೀಯ. ಎಲ್ಲಾ ಘೋಷ್ಟಿಗಳಿಗೂ ಎಲ್ಲರಿಗೂ ಮುಕ್ತ ಆಹ್ವಾನ. ಯಾವ ಆಸನವೂ ಗಣ್ಯರಿಗೆ ಕಾಯ್ದಿರಿಸಲಾಗಿರಲಿಲ್ಲ. ಅಲ್ಲಿ ಎಲ್ಲರೂ ಗಣ್ಯರು ಎಲ್ಲರೂ ನಗಣ್ಯರು.

ಕಾರ್ಯಕ್ರಮದ ಉದ್ಘಾಟನೆಯಲ್ಲಿ, ’Nine Lives’ ಖ್ಯಾತಿಯ ಸಾಹಿತಿ ವಿಲ್ಲಿಯಮ್ ಡ್ಯಾಲಿಂಪರ್ಲ್ ಹೇಳಿದಂತೆ, ವಿಕ್ರಮ ಚಂದ್ರ ರಂತಹ ಬರಹಗಾರರನ್ನು ನಾವು ಸಿಡ್ನಿ ಸಾಹಿತ್ಯೋತ್ಸವ ಮತ್ತು ಮುಂತಾದ ಅಂತರಾಷ್ಟ್ರೀಯ ಸಾಹಿತ್ಯೋತ್ಸವಗಳಲ್ಲಿ ಕಾಣುತ್ತೇವೆ. ಆದರೆ ಭಾರತದ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಅವರನ್ನು ಕಾಣುವುದು ಕಡಿಮೆ. ಅಂತಹವರನ್ನು ಇಲ್ಲಿಗೆ ಕರೆತರುವ ಉದ್ದೇಶವೇ ಈ ಕಾರ್ಯಕ್ರಮದ್ದು ಎಂದರು.

ಕಾರ್ಯಕ್ರಮ ಉದ್ಘಾಟನೆಯಲ್ಲಿ ಗುಲ್ಜಾರ್ ರವರ ಕಾವ್ಯ ವಾಚನ

ಕಾರ್ಯಕ್ರಮ ಉದ್ಘಾಟನೆಯಲ್ಲಿ ಗುಲ್ಜಾರ್ ರವರ ಕಾವ್ಯ ವಾಚನ

ಕನ್ನಡದ ಖ್ಯಾತ ನಾಟಕಗಾರ, ಬರಹಗಾರ, ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡರ ಉದ್ಘಾಟನಾ ಭಾಷಣದಿಂದ ಆರಂಭವಾಗಬೇಕಿತ್ತದರೂ, ದಿಲ್ಲಿಯಲ್ಲಿ ಕವಿದ ಹಿಮ ದಟ್ಟನೆಯಿಂದ ಅವರ ಭಾಷಣವನ್ನು ಮೂರನೇ ದಿನಕ್ಕೆ ಮುಂದೂಡಲಾಗಿತ್ತು.

ಅರವಿಂದ್ ಕೄಷ್ಣ ಮಲ್ಹೋತ್ರ ರವರ ಕಾವ್ಯ ವಾಚನದೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು. ಮೊದಲಿಗೆ ಮಾರಾಠಿ ಸಾಹಿತಿ ಧಾಲ್ ಸತ್ವನ್ ರವರ ಕವನ ವಾಚನ ಮಾಡಿದರು. ಅವರ ಒಂದು ಕವನ ಭಯೋಗ್ರಾಫ್ (ಚರಿತ್ರ್ — ಮರಾಠಿಯಲ್ಲಿ) ಕಾವ್ಯ ಗಮನ ಸೆಳೆಯಿತು. ನಂತರ ಕಬೀರ್ ದಾಸನ ಕವನಗಳ ತಮ್ಮದೇ ಇಂಗ್ಳಿಶ್ ಅನುವಾದವನ್ನು ವಾಚಿಸಿದರು. ನಂತರ ಅರುಣ್ ಕೊಲಾತ್ಕರ್ ರವರ “ದ ಬೋಟ್ ರೈಡ್ ಅಂಡ್ ಅದರ್ ಪೊಯೆಮ್ಸ್” ನಿಂದ ಎರಡು ಕವನಗಳ ವಾಚನ ಮಾಡಿದರು. ನಂತರ ಹಿಂದಿ ಚಲನಚಿತ್ರಗಳ ಖ್ಯಾತ ಸಾಹಿತಿ ಗುಲ್ಜಾರ್ ರವರು ಪುಸ್ತಕಗಳ ಬಗ್ಗೆ ಬರೆದ ಒಂದು ಹಿಂದಿ ಕವನವನ್ನು ವಾಚಿಸಿದರು. ಇದು ಪ್ರೇಕ್ಷಕರಿಂದ ಅಪಾರ ಮೆಚ್ಚಿಗೆಯನ್ನು ಗಳಿಸಿ ಚಪ್ಪಾಳೆಯ ಕರಾಡತನ ಮೊಳಗಿತ್ತು.

ನಂದಿತಾ ಪೂರಿ, ಓಂಪೂರಿ ಮತ್ತು ಗಿರೀಶ್ ಕರ್ನಾಡ್ ರವರಿಂದ ತುಘಲಕ್ ನಾಟಕದ ಓದು

ನಂದಿತಾ ಪೂರಿ, ಓಂಪೂರಿ ಮತ್ತು ಗಿರೀಶ್ ಕರ್ನಾಡ್ ರವರಿಂದ ತುಘಲಕ್ ನಾಟಕದ ಓದು


ಅಂದು ಸಂಜೆ ಗಿರೀಶ್ ಕಾರ್ನಾಡ್, ಓಂಪುರಿ ಮತ್ತು ನಂದಿತಾ ಪೂರಿ, ಗಿರೀಶ್ ಕಾರ್ನಾಡ್ ವಿರಚಿತ ತುಘಲಕ್ ನಾಟಕವನ್ನು(ಆಂಗ್ಲ ಅನುವಾದ) ಓದಿದ್ದು, ವಿಶೇಷ,

ತೇನ್‌ಸೀನ್ ಸಂಡ್ಯು ಯವರೊಂದಿಗೆ ಸಂವಾದ

ತೇನ್‌ಸೀನ್ ಸಂಡ್ಯು ಯವರೊಂದಿಗೆ ಸಂವಾದ


ಗಿರಿಶ್ ಕಾರ್ನಾಡ್ ಮತ್ತು ಮೈಕೇಲ್ ಫ್ರ್ಯಾಮ್

ಗಿರಿಶ್ ಕಾರ್ನಾಡ್ ಮತ್ತು ಮೈಕೇಲ್ ಫ್ರ್ಯಾಮ್

ಎರಡನೇ ದಿನ ದಕ್ಷಿಣ ಏಶಿಯಾ ರಾಷ್ಟ್ರಗಳ ರಾಜಕೀಯ ಸ್ಥಿತಿಯನ್ನು ವಿಷ್ಲೇಶಿಸುವಂತಹ ಘೋಷ್ಟಿಗಳೇ ಹೆಚ್ಚಿದ್ದವು. ಮೊದಲನೇ ಘೋಷ್ಟಿಯಲ್ಲಿ ನಲ್ಲಿ ಗಿರಿಶ್ ಕಾರ್ನಾಡ್ ಮತ್ತು ಮೈಕೇಲ್ ಫ್ರ್ಯಾಮ್ ರವರು ನಾಟಕ ರಂಗದ ಬಗ್ಗೆ ಚರ್ಚಿಸಿದರು. ಅಮೇರಿಕಾದ ವಿರುದ್ಧ ಇರುವ ಎಲ್ಲಾ ಪಿತೂರಿ ಕಥೆಗಳ (Conspirace theories) ಬಗ್ಗೆ ನಡೆದ ಒಂದು ಸಂವಾದದಲ್ಲಿ ಭಾಗವಹಿಸಿದ್ದವರು ಶ್ರೋತೃಗಳಿಂದ ಕಟು ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಟಿಬೆಟ್ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಾಗಿರುವ ತೇನ್‌ಸೀನ್ ಸಂಡ್ಯು ಯವರ ಜೊತೆಗೆ ನಡೆದ ಸಂವಾದ ಕೂಡ ಬಹಳ ಚನ್ನಾಗಿತ್ತು. ತೇನ್‌ಸೇನ್ ರವರು ತಮ್ಮದೇ ಕವನ ಸಂಕಲನವಾದ “ಕೊರಾ” ದಿಂದ ಕೆಲವು ಕವನಗಳನ್ನು ವಾಚಿಸುದ್ದು ವಿಶೇಷವಾಗಿತ್ತು.

ಗಿರೀಶ್ ಕಾರ್ನಾಡರ ಭಾಷಣ

ಗಿರೀಶ್ ಕಾರ್ನಾಡರ ಭಾಷಣ


ಮೂರನೇ ದಿನದ ಘೋಷ್ಟಿಗಳಲ್ಲಿ ಗಮನ ಸೆಳೆದದ್ದು, ಲೋನ್ಲಿ ಪ್ಲಾನೆಟ್ ನ ಸೃಷ್ಟಿಕರ್ತ ಟೋನಿ ವ್ಹೀಲರ್ ಜೊತೆಗಿನ ಸಂವಾದ ಮತ್ತು ವಾತ್ಸಾಯನ ಮತ್ತು ಕಾಮಸೂತ್ರದ ಬಗ್ಗೆ ಇದ್ದ ಒಂದು ಸಂವಾದ. ಗಿರೀಶ್ ಕಾರ್ನಾಡ್ ರವರು “ಭಾರತವನ್ನು ಮನರಂಜಿಸುತ್ತಿರುವುದು” ಎಂಬ ವಿಷಯದ ಬಗ್ಗೆ ಭಾಷಣವನ್ನು ಕೂಡ ನೀಡಿದರು. ನೊಬೆಲ್ ಪ್ರಶಸ್ತಿ ವಿಜೇತ ವೊಲೆ ಸೋಯಿಂಕ ಜೊತೆಗಿನ ಸಂವಾದ ಕೂಡ ಪ್ರೇಕ್ಷಕರಿಂದ ಕಿಕ್ಕಿರಿದಿತ್ತು. ನಾಲ್ಕನೇ ದಿನ ರೇಬಾ ಸಾಮ್ ರವರು ರಬೀಂದ್ರನಾಥ್ ಟ್ಯಾಗೋರ್ ರವರ ಕೆಲವು ಕಾವ್ಯಗಳನ್ನು ಹಾಡಿದರಲ್ಲದೆ, ರವೀಂದ್ರರ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿಸಿದರು. ರವೀಂದ್ರರ “ಎಕ್ಲ ಚಲೋರೆ” ಹಾಡನ್ನು ಹಾಡುವಾಗ ಎಲ್ಲರೂ ಧ್ವನಿಗೂಡಿಸಿದ್ದು ವಿಶೇಷವಾಗಿತ್ತು.
ವಿಲ್ಲಿಯಮ್ ಡ್ಯಾಲಿಂಪರ್ಲ್ ಜೊತೆ ಟೋನಿ ವ್ಹೀಲರ್

ವಿಲ್ಲಿಯಮ್ ಡ್ಯಾಲಿಂಪರ್ಲ್ ಜೊತೆ ಟೋನಿ ವ್ಹೀಲರ್


ನೊಬೆಲ್ ಪ್ರಶಸ್ತಿ ವಿಜೇತ ವೋಲೆ ಸೋಯಿಂಕಾ ಜೊತೆ ಸಮ್ಮೇಳನದ ನಿರ್ದೇಶಕ ಸಂಜಯ್

ನೊಬೆಲ್ ಪ್ರಶಸ್ತಿ ವಿಜೇತ ವೋಲೆ ಸೋಯಿಂಕಾ ಜೊತೆ ಸಮ್ಮೇಳನದ ನಿರ್ದೇಶಕ ಸಂಜಯ್


ಕೊನೆಯ ದಿನ ಪುಸ್ತಕ ಪ್ರಕಾಶನದ ಏಳು ಬೀಳುಗಳ ಮೇಲೆ ಬೆಳಕು ಚೆಲ್ಲುವ ಸಂವಾದಗಳು ಏರ್ಪಟ್ಟಿದ್ದವು. ಕೊನೆಗೆ ಅಭಿವೃದ್ಧಿ ಹೆಸರಿನಲ್ಲಿ ಪ್ರಜೆಗಳ ವಿರುದ್ಧ ರಾಜ್ಯ ವ್ಯಾಜ್ಯ ಮಾಡುತ್ತಿದೆ ಎಂಬ ವಿಷಯದ ಮೇಲೆ ಪರ ವಿರೋಧಗಳ ಚರ್ಚೆಯೊಂದಿಗೆ ಸಮ್ಮೇಳನ ಅಧಿಕೃತ ಮುಕ್ತಾಯ ಕಂಡಿತು. ಸಮ್ಮೇಳನದ ಮುಖ್ಯ ಪ್ರಾಯೋಜಕರಾದ ಡಿ ಎಸ್ ಸಿ ಸಂಸ್ಥೆಯ ನಿರ್ದೇಶಕರಾದ ನರೂಲಾ ರವರು ಮುಂದಿನ ವರ್ಷದಿಂದ ದಕ್ಷಿಣ ಏಷಿಯಾದ ಸಾಹಿತಿಗಳ ಉತ್ತಮ ಬರವಣಿಗೆಗೆ ೨೫ ಲಕ್ಷದ ಬಹುಮಾನವನ್ನು ಘೋಷಿಸಿದ್ದು ನೆರೆದಿದ್ದವರಲ್ಲಿ ಹರ್ಷೋದ್ಗಾರವನ್ನುಂಟು ಮಾಡಿತು.

ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಚೇತನ್ ಭಗತ್ ಹಸ್ತಾಕ್ಷರಕ್ಕೆ ಮಕ್ಕಳು ಮುಗು ಬಿದ್ದದ್ದು ಹೀಗೆ

ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಚೇತನ್ ಭಗತ್ ಹಸ್ತಾಕ್ಷರಕ್ಕೆ ಮಕ್ಕಳು ಮುಗು ಬಿದ್ದದ್ದು ಹೀಗೆ

ಊಟ, ಮತ್ತು ಟೀ ವಿರಾಮದ ವೇಳೆಯಲ್ಲಿ ಹಲವಾರು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಜರುಗಿದವು.

ಐದೂ ದಿನಗಳ ಸಂಜೆಯಂದು ಸಂಗೀತ ಕಾರ್ಯಕ್ರಮಗಳು ಕೂಡ ಜರುಗಿದವು. ಒಟ್ಟಿನಲ್ಲಿ ಈ ಸಾಹಿತ್ಯದ ಹಬ್ಬ ಭಾಗವಹಿಸಿದವರಿಗೆಲ್ಲಾ ಒಂದು ಹೊಸ ಹುರುಪನ್ನು ಕೊಡುವಲ್ಲಿ ಯಶಸ್ವಿಯಾಯಿತು.



1 ಪ್ರತಿಕ್ರಿಯೆ

  1. ಚೆನ್ನಾಗಿ ಬರೆದಿದ್ದೀಯ ಗುರು. ಇನ್ನೂ ಸ್ವಲ್ಪ ವಿವರವಾಗಿ ಇದ್ದಿದ್ದರೆ ಇನ್ನಷ್ಟು ಮೆರುಗು ಬರುತ್ತಿತ್ತು ಲೇಖನಕ್ಕೆ.

ಪ್ರತಿಕ್ರಿಯಿಸಿ