ಬೆಲೆ ಏರಿಕೆ ಮತ್ತು ದಿನಕರ ಚೌಪದಿ
ದಿನಸಿಗಳು, ತರಕಾರಿಗಳು ಗಗನಕ್ಕೆ ಏರಿರುವ ಸಂದರ್ಭದಲ್ಲಿ, ಚುಟುಕ ಬ್ರಹ್ಮ ದಿನಕರ ದೇಸಾಯಿಯವರು ಬರೆದಿರುವ ಈ ಚೌಪದಿಗಳನ್ನೋದಿ..

ಚಿತ್ರಕೃಪೆ: http://nirpars.blogspot.com/
ತಿನ್ನೋಣ ಗೆಣಸು
ಅಕ್ಕಿಯೇತಕೆ, ಮಗಳೆ? ತಿನ್ನೋಣ ಗೆಣಸು.
ಸಾಲದಿದ್ದರೆ ಗೆಣಸು, ಉಂಟು ಕರಿ ಮೆಣಸು.
ಈ ರೀತಿ ಬಿಡಿಸಿದರೆ ಅನ್ನದ ಸಮಸ್ಯೆ-
ಬೆಳದಿಂಗಳಾಗಿ ಹೊಳೆಯುವುದು ಅಮಾವಾಸ್ಯೆ.
ಬೆಲೆಗಳ ಆಕಾಶ ಯಾತ್ರೆ
ಅಕ್ಕಿ ಸಕ್ಕರೆ ಗೋದಿ ಆಕಾಶಕೇರಿ
ಚಿಕ್ಕೆಯಾದವು ಎಂದು ಹೇಳುವರು, ನಾರಿ.
ಜನಗಳೆಲ್ಲಾ ವಿಮಾನದ ಮೇಲೆ ಕೂತು
ನಭಕೇರಿದರೆ ಮಾತ್ರ ಕೇಸರಿಭಾತು
ಪ್ರಧಾನಿಯ ಕರೆ
ಅಗ್ಗವಾಗುವುದುಂಟು ಧಾನ್ಯಗಳ ರೇಟು
ಆಮೇಲೆ ಕೂಲಿಗೂ ರೇಶಿಮೆಯೆ ಕೋಟು.
ಆ ತನಕ ನಾವೆಲ್ಲರೂ ತಾಳ್ಮೆಯಿಂದ
ತುಸು ಕಡಿಮೆ ತಿಂದು ಸಹಕರಿಸಬೇಕೆಂದ
ಉಪವಾಸ
ಎಷ್ಟಾಯ್ತು ಉಪವಾಸ ಸತ್ತವರ ಸಂಖ್ಯೆ?
ಯಮದೇವನಿಗೆ ಕೂಡ ಗೊತ್ತಿಲ್ಲ ಅಂಕೆ.
ಪ್ರತಿ ದಿವಸವೂ ಕುಳಿತು ಮಾಡುವನು ಲೆಕ್ಕ.
ಅಳೆಯಲಾಗುವುದಿಲ್ಲ ಮಾನವನ ದು:ಖ
ನನ್ನ ಆಹಾರ
ಎಂದಿಗೂ ನಾನು ತಿನ್ನುವುದಿಲ್ಲ ಪೇಡೆ
ಹೀಗಾಗಿ ನನಗಿಲ್ಲ ಯಾರದೂ ಭೇಡೆ.
ನಾನು ತಿನ್ನುವುದು, ಸಖಿ, ಹುಳಿ ಮತ್ತೆ ಖಾರ.
ಇದಕೆನ್ನುವರು ಜನರು ಚುಟುಕದಾಹಾರ
ಮಂತ್ರಿಗಳು ಬಂದು
ಏನೇನು ಮಾಡಿದರು ಮಂತ್ರಿಗಳು ಬಂದು?
ಹೊರಟು ಹೋದರು ಬಂಗ್ಲೆಯಲಿ ಕೋಳಿ ತಿಂದು.
ಕಂತ್ರಾಟುದಾರನಿಗೆ ಭರವಸೆಯ ನೀಡಿ.
ಭಕ್ಷೀಸು ಪಡೆದುಕೊಂಡು ಒಂದು ಗಾಡಿ.
ಧಾನ್ಯದ ಹಂಚಿಕೆ
ಒಂದಲ್ಲ, ಎರಡಲ್ಲ ಮೂರು ಮಧ್ಯಾಹ್ನ
’ಕ್ಯೂ’ ಹಿಡಿದು ನಿಂತರೂ ಸಿಗಲಿಲ್ಲ ಧಾನ್ಯ
ಮುಂಜಾನೆ ಬಾ ಎಂದು ಹೇಳಿದರು ಮತ್ತೆ.
ಮುಂಜಾನೆ ಹೋದಾಗ ಕಾಳು ನಾಪತ್ತೆ.
ಕಾಳು ಮತ್ತು ಹುಲ್ಲು
ಕಡಿಮೆಯಾಗಲು ಕಾಳು ಹೆಚ್ಚಾಯ್ತು ಹುಲ್ಲು.
ಇದಕೆಂಬೆ ಪಂಚವಾರ್ಷಿಕದ ಸ್ಯಾಂಪಲ್ಲು.
ಮೂರು ಯೋಜನೆ ಮುಗಿಸಿ ಕೊನೆಗೆ ಬರಗಾಲ.
ಹುಟ್ಟುವಳಿಗಿಂತಲೂ ಹೆಚ್ಚಾಯ್ತು ಸಾಲ.
ಸಚಿವರ ಸೂಚನೆ
ಕಡಿಮೆಯಾದರೆ ಕಾಳು-ಕಡಿಮೆಯ ಉತ್ಪತ್ತಿ
ಪ್ರತಿಯೊಬ್ಬ ನಾಗರಿಕ ತಿನಬಹುದು ತತ್ತಿ.
ತುಟ್ಟಿಯಾದರೆ ತತ್ತಿ ಮನೆಯಲ್ಲಿ ಹೇಟೆ
ಸಾಕಿದರೆ ನಿಂತುಬಿಡುವುದು ಕಳ್ಳಪೇಟೆ
ಅಧಿಕಾರಿ ಹೇಳಿದ್ದು
ಕಬ್ಬು ತಿನ್ನುವ ರೀತಿ ಗೊತ್ತುಂಟೆ ಕುರಿಗೆ?
ಮೇಲಿನೆಲೆಗಳ ಮೇದು ಮರಳುವವು ಮನೆಗೆ
ಕುರಿಯಂತೆ ಆಗಬಾರದು ನಾವು ಅಂದೆ.
ಅದಕಾಗಿಯೇ ನಾನು, ಸರಿಯಾಗಿ ತಿಂದೆ.
ತುಟ್ಟಿಯಾದರೆ
ತುಟ್ಟಿಯಾದರೆ ಅಕ್ಕಿ ತಿನ್ನಿ ಕರಿಗಡುಬು.
ಮತ್ತೆ ರಾತ್ರಿಗೆ ತಿನ್ನಿ ಬೇಕಷ್ಟು ಸೇಬು.
ಹೀಗೆಂದು ಮಂತ್ರಿಗಳು ಉಪದೇಶ ನೀಡಿ
ಮರಳಿದರು ಅವಳ ಜೊತೆ ಹತ್ತಿ ಗಾಡಿ.
ಸುಲಭ ಉಪಾಯ
ದೇಶದೊಳಗಿಲ್ಲ ಸಾಕಷ್ಟು ಆಹಾರ.
ಊಟ ಬಿಡಬೇಕಂತೆ ಪ್ರತಿ ಸೋಮವಾರ.
ನಿತ್ಯವೂ ಊಟ ಬಿಟ್ಟರೆ ಲೇಸು.
ಆಹರವೂ ಉಳಿದು ಕಿಸೆಯೊಳಗೆ ಕಾಸು.



