ವ್ಯಕ್ತಿ ಪೂಜೆ, ವಿಚಾರಧಾರೆ, ಜೀವನ
ಎರಡು ವಾರಗಳ ಹಿಂದೆ ಕನ್ನಡ ಭವನದಲ್ಲಿ ಸಿರಿವರ ಪ್ರಕಾಶನದಿಂದ ಪ್ರಕಟಗೊಂಡ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭ ಇತ್ತು. ಆ ಪುಸ್ತಕಗಳಲ್ಲಿ ಪತ್ರಕರ್ತ ಮಂಗಳೂರು ವಿಜಯ ರವರು ಬರೆದ ’ಮಾವೋ’ ಕೃತಿಯೂ ಒಂದು. ಈ ಪುಸ್ತಕಗಳ ಬಗ್ಗೆ ನಾಲ್ಕು ಮಾತುಗಳನ್ನಡಲು ಕರೆದಿದ್ದು ಶೂದ್ರ ಶ್ರೀನಿವಾಸ್ ರವರನ್ನು.
ಶೂದ್ರ ಶ್ರೀನಿವಾಸ್ ರವರು ತಾವು ಮಾವೋ ರವರ ಕಟ್ಟ ಅಭಿಮಾನಿಗಳೆಂದು ತಮ್ಮ ಮಾತನ್ನು ಪ್ರಾರಂಭಿಸಿದರು. ಮಾವೋರವರ ಗುಣಗಾನ ಯಾವ ಮಟ್ಟದಲ್ಲಿ ನಡೆಯಿತೆಂದರೆ, ಕೇಳಿದ್ದರೆ ಸ್ವತ: ಚೈನಾ ಎಡ ಪಂಥ ನಾಯಕರೆ ಮುಜುಗರ ಪಟ್ಟುಕೊಳ್ಳುತ್ತಿದ್ದರೇನೋ!
ಈ ಕೆಲವು ಮಾತುಗಳನ್ನು ಅರಗಿಸಿಕೊಳ್ಳಿ.
೧)ಮಾವೋರವರದು ಮತ್ತು ಗಾಂಧಿಯವರದು ಒಂದೇ ವ್ಯಕ್ತಿತ್ವವಂತೆ! ಇತ್ತೀಚೆಗೆ ತಮ್ಮದು ಯಾವುದೇ ವಿಚಾರಧಾರೆಯಾದರೂ, ಗಾಂಧಿಯವರದೂ ಅದೇ ಎಂದು ಹೇಳಿಕೊಳ್ಳುವ ಪರಿಪಾಠ ಬೆಳೆದಿರುವುದು ಖೇದ!
೨)ಮಾವೋ ತನ್ನ ವಿರೋಧಿಗಳನ್ನು ಲಕ್ಷಗಟ್ಟಲೆ ನಿರ್ದಾಕ್ಷಿಣ್ಯವಾಗಿ ಕೊಂದಿದ್ದು “Democratically” ಸದೆಬಡಿದಿದ್ದಂತೆ. ಶೂದ್ರ ಶ್ರೀನಿವಾಸ್ ರವರಿಗೆ ಕಮ್ಯುನಿಸಮ್ ನಲ್ಲಿ ಪ್ರಜಾಪ್ರಭುತ್ವ ಕಂಡುಬಂದಿದ್ದು ಹೇಗೋ? ಒಂದು ವಿಚಾರಧಾರೆಯನ್ನು ಬೆಳೆಸಿಕೊಂಡು, ಜನರು ಅದನ್ನು ಒಪ್ಪದೇ ಹೋದಾಗ, ಸರ್ವಾಧಿಕಾರಿಯಾಗಿ ಅವರನ್ನು ಕೊಲೆ ಮಾಡುವುದು ಯಾವ ಪ್ರಜಾಪ್ರಭುತ್ವದ ಲಕ್ಷಣವೋ?
೩)ಇನ್ನು ಚೀನಾ ವಸ್ತುಗಳ ಮೇಲೆ ಶೂದ್ರ ಶ್ರೀನಿವಾಸ್ ರವರಿಗೆ ಎಲ್ಲಿಲ್ಲದ ಪ್ರೇಮ. ತಾವು ಸುಮಾರು ೩೦ ವರ್ಷಗಳ ಹಿಂದೆ ಚೀನಾಕ್ಕೆ ಭೇಟಿಯಿತ್ತಾಗ, ಕೊಂಡು ತಂದಿದ್ದ ಪೆನ್ನನ್ನು ತಮ್ಮ ಜೇಬಿನಿಂದ ಹೆಮ್ಮೆಯಿಂದ ತೆಗೆದು ತೋರಿಸಿದಾಗ, ಬಹಳಷ್ಟು ಜನರಿಗೆ ಗೊಂದಲವಾಯಿತು. ಅಲ್ಲಿದ್ದವರು ಈ ಚೀನಾ ವಸ್ತುಗಳ ಬಗ್ಗೆ ಗೊತ್ತಿಲ್ಲದ ಅಙ್ನಾನಿಗಳೇನಲ್ಲ. ಚೀನಾದ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ತಯಾರು ಮಾಡಲು ಬಳಸುವ ವಾಮ ಮಾರ್ಗಕ್ಕೆ ಬಹಳಷ್ಟು ಉದಾಹರಣೆಗಳಿವೆ.
೪)ಇನ್ನು ಚೀನ ಟಿಬೆಟನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಸಮರ್ಥಿಸಲು, ಶೂದ್ರ ಶ್ರೀನಿವಾಸರು, ಭಾರತ ಕಾಶ್ಮೀರಕ್ಕೆ ಅನ್ಯಾಯ ಮಾಡಿದೆ ಎಂದಾಗ ಒಬ್ಬ ವ್ಯಕ್ತಿ ತನ್ನ ವಿಚಾರಧಾರೆಯನ್ನು ಸಮರ್ಥಿಸಿಕೊಳ್ಳಲು ಎಂತಹ ಮಟ್ಟಕ್ಕಾದರೂ ಇಳಿಯಬಹುದೆ ಎಂದೆನಿಸಿತು.
ಹೀಗೆ ಚೀನದ ದೇಶ ಭಕ್ತಿ, ಮಾವೋರವರ ವ್ಯಕ್ತಿ ಪೂಜೆ, ಎಡ ಪಂಥದ ವಿಚಾರ ಧಾರೆಯ ಮಾತಿನ ಕಡಲನ್ನೇ ಹರಿಸಿದ ಶೂದ್ರ ಶ್ರೀನಿವಾಸ್, ಮಾವೋ ರವರ ಬಗ್ಗೆ ಬರೆದ ಪುಸ್ತಕದ ಪುಟ ಕಡಿಮೆಯಾಯಿತು, ಇನ್ನೂ ಹೆಚ್ಚು ಬರೆಯಬೇಕೆಂದು ತಿಳಿಸಿ ಪುಸ್ತಕದಲ್ಲೇನಿದೆ ಎಂಬ ವಿಷಯವನ್ನೇ ಹೇಳದೆ ಮಾತು ಮುಗಿಸಿಬಿಟ್ಟರು! ನಂತರ ಮಂಗಳೂರು ವಿಜಯ ರವರು ತಮ್ಮ ಪುಸ್ತಕದ ತಿರುಳನ್ನು ಹೇಳಿದಾಗಲೇ ಗೊತ್ತಾದದ್ದು, ಆ ಪುಸ್ತಕ ಮಾವೋನ ಮತ್ತೊಂದು ಮುಖವನ್ನು ವಿಷ್ಲೇಶಿಸುವ ಪುಸ್ತಕ. ಆ ಸರ್ವಾಧಿಕಾರ ಧೋರಣೆಯನ್ನು ಪ್ರಶ್ನಿಸಲು, ಮಾವೋ ನಿಧನವಾದ ನಂತರ ಅಧಿಕಾರ ಯಾರ ಕೈ ಸೇರಬೇಕು ಎಂಬ ಸ್ಪಷ್ಟತೆ ಇಲ್ಲವಾಗದೆ ಹೋದದ್ದರಿಂದ, ಮಾವೋ ಹಿಡಿದ ಮಾರ್ಗ ಸರಿಯೇ, ಮಾವೋ ಪ್ರಜಾ ಪ್ರಭುತ್ವದ ಮೊರೆ ಹೋಗಬೇಕಿತ್ತೇ ಎಂಬ ಸಂದೇಹಗಳನ್ನು ವ್ಯಕ್ತ ಪಡಿಸುವ ಪುಸ್ತಕ ಅದು.
ಹೌದು ಈ ವ್ಯಕ್ತಿ ಪೂಜೆ, ಬೆಳೆಸಿಕೊಂಡ ವಿಚಾರಧಾರೆಗಳು ಅತಿರೇಕಕ್ಕೆ ಹೋದಾಗ ಹೀಗಾಗುವುದುಂಟು. ಅವರು ಬೇರೆ ವಿಚಾರಧಾರೆಗಳ ಮೇಲೆ ಕಿವುಡು, ಕುರುಡರಾಗಿಬಿಡುತ್ತಾರೆ. ಮಾವೋನಂತವರು ಒಂದು ಹೆಜ್ಜೆ ಮುಂದೆ ಹೋಗಿ, ಸರ್ವಾಧಿಕಾರಿಗಳಾಗಿ ಬೇರೆ ವಿಚಾರಧಾರೆಯನ್ನು ತುಳಿಯಲು ಕೊಲೆ ಮಾಡುವುದಕ್ಕೂ ಹೇಸುವುದಿಲ್ಲ. ಇನ್ನು ಕೆಲವರು ತಮ್ಮದು ಎಡ ಪಂಥೀಯ ವಿಚಾರಧಾರೆ ಎಂದು ಕರೆದುಕೊಂಡು ಕೆಲವು ವರ್ಗ, ಪಕ್ಷಗಳನ್ನು ಟೀಕಿಸುವುದೇ ದೊಡ್ಡ ಘನ ಕಾರ್ಯ ಎಂದುಕೊಳ್ಳುತ್ತಾರೆ. ಇದು ಬಲ ಪಂಥೀಯರು ಎಂದು ಕರೆದುಕೊಳ್ಳುವವರಿಗೂ ಕೆಲವರಿಗೆ ಅನ್ವಯವಾಗುತ್ತದೆ.(ಓದುಗರು ಕೆಲ ದಿನದ ಹಿಂದೆ ನಾರಾಯಣಾಚಾರ್ಯರು ಕುವೆಂಪುರವರ ಶೂದ್ರ ತಪಸ್ವಿ ನಾಟಕದ ಬಗ್ಗೆಯ ಪ್ರತಿಕ್ರಿಯೆಯನ್ನು ನೆನಪಿಸಿಕೊಳ್ಳಬಹುದು).
ಈ ವಿಚಾರಧಾರೆ ಎಂಬುದೇ ಹೀಗೆ. ಒಂದು ವಯಸ್ಸಿನಲ್ಲಿ, ನಾವು ಬೆಳೆದು ಬಂದ ವಾತಾವರಣ ಕೆಲವು ವಿಚಾರಧಾರೆಗಳನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅಂತಹ ವಿಚಾರಧಾರೆಗಳನ್ನು ಎತ್ತಿ ಹಿಡಿಯುವ, ಒತ್ತಿ ಹೇಳುವ ಕೆಲವು ಪ್ರಮುಖರು ವಿಭೂತಿ ಪುರುಷರಾಗಿಬಿಡುತ್ತಾರೆ. ಮನುಷ್ಯ ಬೆಳೆದಂತೆ ವಾತಾವರಣ ಬದಲಾದಂತೆ ವಿಚಾರಧಾರೆಗಳೂ ಬದಲಾಗುವುದುಂಟು. ಅದಕ್ಕೆ ತಕ್ಕಂತೆ ಆದರ್ಶ ವ್ಯಕ್ತಿಗಳೂ ಕೂಡ ಬದಲಾಗುತ್ತಾರೆ. ಆದರೆ ಮತ್ತೊಂದು ವಿಚಾರಧಾರೆಯ ಒಳ್ಳೆಯ ಗುಣಗಳನ್ನು ಒಪ್ಪಿಕೊಳ್ಳುವ ದೊಡ್ಡ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಅಗತ್ಯ ಸಮರಸ ಜೀವನಕ್ಕಿದೆ.
ಇಂದು ಸಾಹಿತ್ಯ ವಲಯದಲ್ಲೂ ಎಡಪಂಥೀಯ ಮತ್ತು ಬಲಪಂಥೀಯ ಎಂಬ ಎರಡು ಗುಂಪಿರುವುದು ಒಳ್ಳೆಯದೋ, ವಿಷಾದದ ಸಂಗತಿಯೋ ವಿಷ್ಲೇಶಿಸುವುದು ಕಷ್ಟ. ಎರಡೂ ಪಂಥದಲ್ಲೂ ಕೆಲವು ಆದರ್ಶಪ್ರಾಯವಾದ ಒಳ್ಳೆಯ ಗುಣಗಳಿವೆ. ಆದರೆ ಕೆಲವರು ಇನ್ನೊಂದು ಪಂಥದ ಮೇಲೆ ರಾಡಿ ಎರಚಾಡುವುದು ದುಃಖದ ಸಂಗತಿ. ಹೀಗೆಂದು ಚರ್ಚೆಯ ಅವಶ್ಯಕತೆಯಿಲ್ಲವೆಂದಲ್ಲ. ಚರ್ಚೆ ಅರ್ಥಪೂರ್ಣವಾಗಿರಬೇಕು,ಆರೋಗ್ಯಕರವಾಗಿರಬೇಕು. ಸುಮ್ಮನೆ ಜರಿಯುವುದೇ ಧ್ಯೇಯವಾಗಬಾರದು.ಇಂದಿನ ದಿನದಲ್ಲಿ ಯಾವುದೇ ಪಂಥದ ಜೊತೆ ಗುರುತಿಸಿಕೊಳ್ಳದವರೇ ಒಳಿತೆನ್ನಿಸುತ್ತದೆ.
ಇದು ಲೇಖಕನ ವಿಚಾರಧಾರೆಯೇ! ಇದಕ್ಕೂ ಚರ್ಚೆಯ ಅವಶ್ಯಕತೆ ಇದೆ. ಒಳ್ಳೆಯದಿದ್ದರೆ ಅದನ್ನು ಬಾಚಿ ತಬ್ಬಿಕೊಳ್ಳುವ ಮನಸ್ಸೂ ಲೇಖಕರಿಗಿದೆ. ಮುಕ್ತ ಚರ್ಚೆ ನಡೆಯಲಿ.



