ಕುವೆಂಪು ಜಯಂತಿ
ಇಂದು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನವರ ಜನ್ಮ ದಿನ.

ಕುವೆಂಪುರವರ ಬಗ್ಗೆ ಹಿಂದೆ ಬರೆದ ಎರಡು ಕಿರು ಲೇಖನಗಳನ್ನು ಇಲ್ಲಿ ಓದಿ.
ಕುವೆಂಪು – ೧
ಕುವೆಂಪು – ೨
ಕುವೆಂಪು ರವರ ಬಗ್ಗೆ ಕನ್ನಡದ ದೈತ್ಯ ಕಾದಂಬರಿಕಾರ “ಅ ನ ಕೃ” ರವರು ಹೀಗೆನ್ನುತ್ತಾರೆ. (ಕನ್ನಡ ಕುಲರಸಿಕರು ಪುಸ್ತಕದಿಂದ ಆರಿಸಿಕೊಂಡದ್ದು)
”
ಕೆ. ವಿ. ಪುಟ್ಟಪ್ಪನವರ ಕೃತಿಗಳ ಬಗ್ಗೆ ಪ್ರಸ್ತಾಪಿಸುತ್ತಾ ರಾಜರತ್ನಂ ಅವರನ್ನು ’ಕನ್ನಡದ ದೈತ್ಯ’ (Titan) ಎಂದು ಸಂಬೋಧಿಸಿದರು. ಕುವೆಂಪು, ಅವರ ಕಾವ್ಯಸೃಷ್ಟಿಯ ಅಗಾಧತೆಯನ್ನು ಕಂಡವರಿಗೆ ಈ ಮಾತು ಅಕ್ಷರಶಃ ಸತ್ಯವೆನಿಸದಿರಲಾರದು.
ನಿಸರ್ಗದೇವಿಯ ತೂಗು ತೊಟ್ಟಿಲಾದ ತೀರ್ಥಹಳ್ಳಿ ಕುವೆಂಪು ಅವರ ಹುಟ್ಟೂರು. ಕೋಗಿಲೆ ಕಾಜಾಣಗಳ ಸಹವಾಸದಲ್ಲಿ, ಗದ್ದೆ ತೋಟಗಳ ಹಸಿರು ಚೆಲುವಿನಲ್ಲಿ ಪಟ್ಟಣದ ಕೃತಕ ನಾಗರೀಕತೆ ಕಾಣದ ಹಳ್ಳಿಗರ ಜತೆಯಲ್ಲಿ ಪುಟ್ಟಪ್ಪನವರು ಬೆಳೆದಿದ್ದಾರೆ. ಪ್ರಕೃತಿಯ ವಿಶ್ವರೂಪ ದರ್ಶನ ಕಂಡು ಬೆರಗಾಗುವರು ಕೆಲವರು, ಅದನ್ನು ತಾತ್ಸಾರ ಮಾಡಿ ಮನಸ್ಸಿನ ಕಣ್ಣಿನ ಮೇಲೆ ಮುಸುಕೆಳೆಯುವವರು ಕೆಲವರು. ಪುಟ್ಟಪ್ಪನವರು ಪ್ರಕೃತಿಯ ಭವ್ಯಾಕೃತಿಗೆ ಬೆರಗಾಗಲೂ ಇಲ್ಲ, ಅದನ್ನು ತಾತ್ಸಾರ ಮಾಡಲೂ ಇಲ್ಲ. ಪ್ರಕೃತಿಯ ತಾಯಿ ಮಡಿಲಿಗೆ ಆತ್ಮಾರ್ಪಣೆ ಮಾಡಿ ಅದರ ಅಮರ ಶ್ರೀಯಲ್ಲಿ ಬೆರೆತ ಪುಣ್ಯಾತ್ಮರು ಪುಟ್ಟಪ್ಪನವರು. ಹುಟ್ಟಿನಿಂದ, ಬೆಳವಣಿಗೆಯಿಂದ ಬಂದ ಈ ಅನುಕೂಲದ ಜೊತೆಗೆ ಎರಡು ವಿಶಿಷ್ಟ ಶಕ್ತಿಗಳು ಕುವೆಂಪು ಅವರ ಜೀವನವನ್ನು ರೂಪಿಸಲು ನೆರವಾದವು. ವಿದ್ಯಾರ್ಜನೆಗೆ ಮೈಸೂರಿಗೆ ಬಂದ ಅವರು ಶ್ರೀರಾಮಕೃಷ್ಣಾಶ್ರಮದಲ್ಲಿ ನೆಲೆಸಿದರು. ಆಶ್ರಮದ ವಾತಾವರಣ, ಅಲ್ಲಿದ್ದ ಕೆಲವು ಯೋಗಶೀಲ ಸನ್ಯಾಸಿಗಳ ಸಹವಾಸ ಅವರ ಮನಸ್ಸನ್ನು ಕಡೆದವು. ಕುವೆಂಪು ಅವರಿಗೆ ವಿದ್ಯಾ ಗುರುಗಳಾಗಿ ಆಚಾರ್ಯ ಬಿ ಎಂ ಶ್ರೀಕಂಠಯ್ಯನವರು ದೊರೆತರು. ಶ್ರೀಯುತರು ತಮ್ಮ ಪಾಂಡಿತ್ಯ, ಸ್ಪೂರ್ಥಿ, ರಸಾನುಪೇಕ್ಷೆಯನ್ನಿ ಶಿಷ್ಯನಲ್ಲಿ ಅಚ್ಚೊತ್ತಿದರು. ಶ್ರೀಯುತರ ನಿರೀಕ್ಷೆಗೂ ಮಿಗಿಲಾದ ಸತ್ವವನ್ನು ದೊರಕಿಸಿಕೊಂಡು ಕುವೆಂಪು ಅವರ ಕಣ್ಮಣಿಯಾದರು. ಶ್ರೀಯವರ ಋಷಿವಾಣಿ “ಕೊಳಲಿನಲ್ಲಿ” ಪುಟ್ಟಪ್ಪನವರ ಆಗಮನವನ್ನು ಮೊಳಗಿತು, ಕರ್ನಾಟಕ ಚೂತವನದಲ್ಲಿ ಚೈತ್ರಾಗಮನವಾಯಿತು.
ಕುವೆಂಪು ಅವರ ಕಾವ್ಯದೀಧಿತಿಯ ಪರಿಚಯ ಮಾಡಿಕೊಡಲು ಒಂದು ಗ್ರಂಥ ಬೇಕಾಗಬಹುದು. ಸುನೀತದಿಂದ ಹಿಡಿದು ಮಾಹಾಕಾವ್ಯದವರೆಗೆ ಕುವೆಂಪು ಬರೆದಿದ್ದಾರೆ. ಎಲೆ, ಹೂವು, ಹಕ್ಕಿ, ಚೆಲುವೆಯರನ್ನು ನೋಡಿ ಕವಿ ಹಿಗ್ಗಿದ್ದಾನೆ. ತನ್ನ ಹೃದಯ ತುಂಬಿದ ಆನಂದವನ್ನು ಧಾರಾಳವಾಗಿ ರಸಿಕರಿಗೆ ಹಂಚಿದ್ದಾನೆ. ಲಲಿತ ಮಧುರವಾದ ಶಬ್ದವಿಲಾಸ, ಬೆಡಗರಿಯದ ಸರಳ ಸಹಜ ಭಾವಾನುವೇಶ, ಉಕ್ಕಂದವಾಗಿ ಹರಿಯುವ ಛಂದಗಳಿಗೆ “ಕೊಳಲು” ಎತ್ತಿದ ಕೈ. ಶ್ರೀಕೃಷ್ಣನ ಕೊಳಲಿನ ನಾದವೈಖರಿಯನ್ನು ನಾವು ಕೇಳರಿಯೆವು. ಆದರದು ಕೆಲ ಕಾಲ ಪುಟ್ಟಪ್ಪನವರ ಕೈವಶವಾಗಿತ್ತೆನ್ನುವುದಕ್ಕೆ ಅವರ “ಕೊಳಲೇ” ಸಾಕ್ಷಿ.
ಕುವೆಂಪು ಮಲೆನಾಡಿನಲ್ಲಿ ಹುಟ್ಟಿ ಬೆಳೆದುದಕ್ಕೆ ಸಾರ್ಥಕತೆಯನ್ನು ತಂದು ಕೊಡುವುದು ಅವರ ಕಾದಂಬರಿ ಕಾನೂರು ಸುಬ್ಬಮ್ಮ ಹೆಗ್ಗಡತಿ. ಮಲೆನಾಡಿನ ಚಿತ್ರಗಳಲ್ಲಿ ಅವರು ತೋರಿದ ವರ್ಣನಾವಿಲಾಸ, ನಿಸರ್ಗದ ಸಜೀವ ಸ್ವರೂಪ, ಚಿತ್ರಣಗಳಲ್ಲಿ ಪರಾಕಾಷ್ಟದೆಶೆಯನ್ನು ಕಾನೂರು ಸುಬ್ಬಮ್ಮನಲ್ಲಿ ಕಾಣಬೇಕು. ನೂರಾರು ಚಿತ್ರಗಳು, ನೂರಾರು ಪಾತ್ರಗಳು. ಕಾನೂರು ಸುಬ್ಬಮ್ಮ ಒಂದು ಕಥೆಯಲ್ಲ, ಕಥಾಮಾಲೆ. ಮಲೆನಾಡಿನ ಒಕ್ಕಲ ಮಕ್ಕಳ ಸಂಸ್ಕೃತಿಯ ವಿಶ್ವಕೋಶ. ಏಕಮುಖವಾಗಿ ಕಥೆ ಸಾಗಿ ಕಾದಂಬರಿಯ ರೂಪುರೇಷೆಯನ್ನು ಸರಿಯಾಗಿ ಬಿಡಿಸುವುದಿಲ್ಲ. ಆದರೆ ಒಂದೊಂದು ದೃಶ್ಯ, ಒಂದೊಂದು ಪಾತ್ರ, ಒಂದೊಂದು ವರ್ಣನೆಯೂ ಒಂದು ಕಡೆದ ಶಿಲ್ಪ. ಎಲ್ಲಿಯೂ ಕೆಸರಿಲ್ಲ. ಎಲ್ಲಿಯೂ ಕಲ್ಮಷವಿಲ್ಲ. ಕಾವ್ಯಕ್ಕೆ ಅಮರತ್ವ ಕೊಡುವುದು ಅದರಲ್ಲಿ ಅಡಕವಾಗಿರುವ ಸತ್ಯಪ್ರಿಯತೆ. ದಾರ್ಶನಿಕನಷ್ಟೇ ಕವಿಯೂ ಸತ್ಯಸಾಧಕನಾಗಿರುತ್ತಾನೆ. ಸತ್ಯವನ್ನು ಪ್ರಿಯವಾಗುವಂತೆ ಹೇಳಲೆತ್ನಿಸುತ್ತಾನೆ. ಅಪ್ರಿಯವಾಗುವಂತೆ ಹೇಳಬೇಕಾದಲ್ಲಿ ಹೇಳಲು ಹಿಂಜರಿಯುವುದಿಲ್ಲ. ಕಾನೂರು ಸುಬ್ಬಮ್ಮ ಕಾದಂಬರಿಯನ್ನು ಸಾಹಿತ್ಯ ದೃಷ್ಟಿಯಿಂದಲ್ಲದೆ ಸತ್ಯಸಾಧನೆಯ ದೃಷ್ಟಿಯಿಂದಲೂ ಗಮನಿಸಬೇಕು. ಮಲೆನಾಡಿನ ಒಕ್ಕಲಮಕ್ಕಳ ಸ್ನೇಹ, ಸೌಜನ್ಯ, ಔದಾರ್ಯಗಳನ್ನು ಚಿತ್ರಿಸುವುದರ ಜೊತೆಯಲ್ಲಿಯೇ ಕುವೆಂಪು, ಅವರಲ್ಲಿ ಅವಿರ್ಭೂತವಾಗಿರುವ ಅಜ್ಞಾನ, ಮೌಢ್ಯ, ದುರಾಚಾರಗಳನ್ನೂ ಬಯಲಿಗೆಳೆದಿದ್ದಾರೆ. ಒಕ್ಕಲುಮಕ್ಕಳಾದ ಕುವೆಂಪು ತಮ್ಮ ಸಮಾಜವೆಂದು ಅದರ ಹೊಲಸನ್ನು ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ”
ಹೀಗೆ ಒಬ್ಬ ಧೀಮಂತ ಸಾಹಿತಿ ಕೃಷ್ಣರಾಯರು ಮತ್ತೊಬ್ಬ ಧೀಮಂತ ಸಾಹಿತಿಯನ್ನು ಪರಿಚಯಿಸುತ್ತರೆ. ಇಂದು ನಾವು ಕೂಡ ಕುವೆಂಪು ರವರನ್ನು ನೆನೆಸಿಕೊಂಡು ಅವರ ವಿಶ್ವಮಾನವ ತತ್ವವನ್ನು ಜೀವನದಲ್ಲಿ ಸಾಧ್ಯವಾದೊಷ್ಟು ಮಟ್ಟಿಗೆ ಅಳವಡಿಸಿಕೊಳ್ಳಬೇಕಾಗಿದೆ.



