ಮನೆಯಂಗಳದಲ್ಲಿ ಮಾತುಕತೆಯಲ್ಲಿ ಪ್ರೊ.ವಿವೇಕ್ ರೈ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ತಿಂಗಳಿನ ಮೂರನೇ ಶನಿವಾರದಂದು ನಯನ ಸಭಾಂಗಣದಲ್ಲಿ ಪ್ರಸ್ತುತ ಪಡಿಸುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ೧೦೭ ನೆ ಸಂಚಿಕೆಯಲ್ಲಿ ಭಾಗವಹಿಸಿದ್ದವರು ಪ್ರೊ. ವಿವೇಕ್ ರೈ ರವರು. ಕನ್ನಡ ವಿ ವಿ ಯ ಮಾಜಿ ಕುಲಪತಿಗಳಾದ ವಿವೇಕ್ ರೈ ರವರು ಸದ್ಯಕ್ಕೆ ಜರ್ಮನಿಯ ವೂಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ, ಕನ್ನಡ ಅಧ್ಯಯನ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

ಮೊದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೆ ನಿರ್ದೇಶಕರಾದ ಮನು ಬಳಿಗಾರ್ ರವರು ವಿವೇಕ್ ರೈ ರವರನ್ನು ಸ್ವಾಗತಿಸಿ, ವಿವೇಕ್ ರೈರವರ ಕಿರು ಪರಿಚಯವನ್ನು ಮಾಡಿ ಕೊಟ್ಟರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಹಿನ್ನಲೆಯಲ್ಲಿ, ಸಂಶೋಧನೆಗೆಂದು ಮುಖ್ಯಮಂತ್ರಿಗಳು ಘೋಷಿಸಿದ ೧೧ ಕೋಟಿ ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳಲು ವಿವೇಕ್ ರೈ ರವರ ಮಾರ್ಗದರ್ಶನದಲ್ಲಿ ಕಾರ್ಯಸೂಚಿಯನ್ನು ಸಿದ್ಧಪಡಿಸಿ, ಅನುದಾನವನ್ನು ೧೧ ವಿಶ್ವವಿದ್ಯಾಲಯಗಳಿಗೆ ಹಂಚಿದ್ದನ್ನು ನೆನಪಿಸಿಕೊಂಡರು. ಆ ವಿಶ್ವವಿದ್ಯಾಲಯಗಳು ವಿವೇಕ್ ರೈ ರವರ ಕಾರ್ಯಸೂಚಿಯಂತೆಯೇ ಕಾರ್ಯವನ್ನು ನಿರ್ವಹಿಸುತ್ತಿರುವದನ್ನ ನೆನೆದರು.
ವಿವೇಕ್ ರೈ ರವರು, ನನ್ನ ಬಗ್ಗೆ ಹೇಳಿಕೊಳ್ಳುವಂತೆ ನನಗೆ ಸೂಚಿಸಿದ್ದಾರೆ, ಆದರೆ ಆತ್ಮಕಥೆಯನ್ನು ಬರೆದುಕೊಳ್ಳಬಾರದು ಎಂದು ನಿರ್ಧರಿಸಿರುವ ನನಗೆ ನನ್ನ ಕಥೆಯನ್ನು ಹೇಳುಕೊಳ್ಳುವ ಅಭ್ಯಾಸವಿಲ್ಲ ಎಂದು ತಮ್ಮ ಮಾತುಗಳನ್ನು ಆರಂಭಿಸಿ, ತಾವು ಪುಣಚಿ ಎಂಬ ಕುಗ್ರಾಮದಲ್ಲಿ ಜನಿಸಿದ್ದಾಗ್ಯೂ, ತಾವು ವಿದ್ಯುತ್ತನ್ನು ಕಂಡದ್ದೇ ತಮ್ಮ ೨೦ ನೆಯ ವಯಸ್ಸಿನಲ್ಲಿ ಎಂದರು.
ತಮ್ಮ ತಂದೆ ತಾನು ಪದವಿ ಶಿಕ್ಷಣ ಪಡೆಯುತ್ತೇನೋ ಇಲ್ಲವೋ ಎಂಬ ಸಂದೇಹದಿಂದ ಶಾಲೆಗೆ ನನ್ನ ಹೆಸರನ್ನು ದಾಖಲಿಸುವಾಗಲೇ, ಹೆಸರಿನ ಮುಂದೆ ಬಿ. ಎ ಯನ್ನು ಸೇರಿಸಿಬಿಟ್ಟರು. ಅದು ನನ್ನ ತಾಯಿಯ ಮತ್ತು ನಮ್ಮ ತಂದೆಯ ಹುಟ್ಟೂರುಗಳ ಮೊದಲನೆ ಅಕ್ಷರಗಳನ್ನು ಒಳಗೊಂಡಿತ್ತು. ಹೀಗೆ ನನ್ನ ಹೆಸರು ವಿವೇಕ್ ರೈ ಬಿ. ಎ ಆಗಿದ್ದು. ವಿಪರ್ಯಾಸ ಎಂದರೆ ನಾನು ಬಿ ಎ ಪದವಿಯನ್ನು ಪಡೆಯಲೇ ಇಲ್ಲ. ಬದಲಾಗಿ ಬಿ ಎಸ್ ಸಿ ಓದಿದೆ ಎಂದರು.
ತಮ್ಮ ತಂದೆ ಶಿವರಾಮ ಕಾರಂತರಿಗೆ ಪರಿಚಿತರು. ಆದುದರಿಂದ ನನಗೆ ಚಿಕ್ಕಂದಿನಿಂದಲೂ ಶಿವರಾಮ ಕಾರಂತರ ಜೊತೆಗೆ ಒಡನಾಟವಿತ್ತು. ನನ್ನ ನಾಮಕರಣಕ್ಕೆ ಹೆಸರನ್ನೂ ಶಿವರಾಮ ಕಾರಂತರೇ ಸೂಚಿಸಿದ್ದಂತೆ ಎಂದರು. ನಾನು ೮ ನೇ ತರಗತಿ ಪೂರೈಸುವುದರೊಳಗೆ ಶಿವರಾಮ ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ಓದಿ ಮುಗಿಸಿದ್ದೆ. ಶಿವರಾಮ ಕಾರಂತರ ವೈಚಾರಿಕ ಪ್ರಭಾವ ನನ್ನ ಮೇಲೆ ಆಗಲೇ ಬೀರಿತ್ತು ಎಂದರು. ತಂದೆ ಕೂಡ ಪತ್ರಕರ್ತರಾಗಿದ್ದರು. ಹೀಗೆ ಓದುವ ಗೀಳು ಸಹಜವಾಗಿಯೇ ಬಂತೆಂದರು.
ತಮ್ಮ ಕಾಲೇಜು ದಿನಗಳನ್ನು ನೆನೆದು, ಕನ್ನಡ ಎಂ ಎ ಪದವಿಗೆ ’ಪರಮೇಶ್ವರ ಭಟ್ಟರು’ ತಮ್ಮನ್ನು ಆಯ್ಕೆ ಮಾಡಿದ್ದನ್ನು ನೆನೆದರಲ್ಲದೆ, ಅವರಂಅತಹ ಸಾಹಿತಿಗಳು ನನ್ನ ಅಧ್ಯಾಪಕರಾಗಿದ್ದು ನನ್ನ ಮೇಲೆ ಬಹಳ ಒಳ್ಳೆಯ ಪ್ರಭಾವ ಬೀರಿತು ಎಂದರು. ಆ ಸಮಯದಲ್ಲಿ ತಮ್ಮ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವಾರು ಕನ್ನಡ ಕವಿಗಳು ಬಂದು ಭಾಷಣ ಮಾಡುತ್ತಿದ್ದುದರಿಂದ ಅವರುಗಳ ನಿಕಟ ಪರಿಚಯ ತಮಗಾಯಿತು ಎಂದರು. ಆಗ ಮನೆಮನೆಗೆ ಪುಸ್ತಕಗಳನ್ನು ತಲುಪಿಸಬೇಕೆಂದು ಪುಸ್ತಕಗಳನ್ನು ಚೀಲದಲ್ಲಿ ತುಂಬಿ ಮಾರುತ್ತಿದ್ದರಂತೆ. ಒಮ್ಮೆ ಒಂದು ಮಧ್ಯದ ಅಂಗಡಿಯವ ನನಗೆ ಇವೆಲ್ಲಾ ಅರ್ಥವಾಗುವುದಿಲ್ಲ, ಬೇಡ ಹೋಗಿ ಎಂದಾಗ ಅವನಿಗೂ ರಾಜರತ್ನಂರವರ ಯಂಡ್ಕುಡ್ಕ ರತ್ನ ಪುಸ್ತಕವನ್ನು ಮಾರಿ ಬಂದಿದ್ದರಂತೆ.
ತಮ್ಮ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದ ಸ್ವಾರಸ್ಯಕರ ಸನ್ನಿವೇಶವನ್ನು ಶ್ರೋತೃಗಳ ಜೊತೆ ಹಂಚಿಕೊಂಡರು. ತಾವು ಅಧ್ಯಾಪಕ ವೃತ್ತಿಯನ್ನು ಪ್ರಾಂಭಿಸಿದಾಗ ಆದಿಪುರಾಣವನ್ನು ಭೋದಿಸುವ ಪ್ರಸಂಗ ಒದಗಿ ಬಂತಂತೆ. ತಾವು ಪಾಠ ಹೇಳಬೇಕಿದ್ದ ವಿದ್ಯಾರ್ಥಿಗಳು, ತಾವು ವಿದ್ಯಾರ್ಥಿಯಾಗಿದ್ದಾಗ ತಮ್ಮ ಕಿರಿಯ ವಿದ್ಯಾರ್ಥಿಗಳಂತೆ. ಅವರ ಜೊತೆ ತಮಾಷೆಯಿಂದ ಕಾಲ ಕಳೆಯುತ್ತಿದ್ದವರಿಗೆ, ಈಗ ಆದಿ ಪುರಾಣದ ವೈರಾಗ್ಯದ ಪಾಠ ಹೇಳುವ ಪ್ರಸಂಗ ಒದಗಿದಾಗ ಆ ತರುಣ ವಿದ್ಯಾರ್ಥಿ, ವಿದ್ಯಾರ್ಥಿನಿಯರೆಲ್ಲಾ ಮುಸಿ ಮುಸಿ ನಗುತ್ತಿದ್ದರಂತೆ!
ಜಾನಪದದಲ್ಲಿ ತಾವು ಇಷ್ಟೆಲ್ಲಾ ಸಂಶೋಧನೆ, ಸಾಧನೆ ಮಾಡಿದ್ದರೂ ತಾವು ಎಂದಿಗೊ ಜಾನಪದವನ್ನು ಪಠ್ಯ ವಿಷಯವಾಗಿ ಓದಿಲ್ಲವೆಂದರು.
ನಂತರ ಕಾರ್ಯಕ್ರಮ ಶ್ರೋತೃಗಳ ಪ್ರಶ್ನೆಗಳಿಗೆ ತೆರೆದುಕೊಂಡಿತು.
* ತುಳು ನಾಡಿನ ಪ್ರಸ್ತಾವ, ಇತ್ತೀಚೆಗೆ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ಎಲ್ಲಿಯೂ ಕೇಳಿ ಬಂದಿಲ್ಲ. ಮಾಧ್ಯಮದಲ್ಲೂ ಕೇಳಿ ಬಂದಿಲ್ಲ. ಭಾಷೆ, ಜನಾಂಗದ ಆಧಾರದ ಮೇಲೆ ರಾಜ್ಯಗಳನ್ನು ಸೃಷ್ಟಿಸುವುದನ್ನು ತಾವು ಅನುಮೋದಿಸುವುದಿಲ್ಲ ಎಂದರು.
* ಜರ್ಮನಿಯಲ್ಲಿ ತಾವು ಪ್ರಾಧ್ಯಾಪಕರಾಗಿರುವು ವಿಶ್ವವಿದ್ಯಾಲಯದಲ್ಲಿ ೭ ಜನ ನೊಬೆಲ್ ಪಾರಿತೋಷಕ ವಿಜೇತ ವಿಜ್ಞಾನಿಗಳಿದ್ದಾರೆ. ಈ ದೃಶ್ಯ ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವುದಿಲ್ಲ. ಅಲ್ಲಿ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಇಳಿ ಸಮಯದಲ್ಲಿ ಸುಮಾರು ೨೦೦೦-೩೦೦೦ ವಿದ್ಯಾರ್ಥಿಗಳನ್ನು ನೋಡಬಹುದು. ಆದರೆ ಇಲ್ಲಿನ ಗ್ರಂಥಾಲಯಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವುದು ಸ್ವಲ ಕಡಿಮೆ ಎಂದರು.
* ಜರ್ಮನಿಯ ಸುಮಾರು ೨೦೦೦ ಕ್ಕೂ ಹೆಚ್ಚು ಉದ್ಯಮಗಳು ಇಂದು ಕರ್ನಾಟಕದಲ್ಲಿವೆ. ಅಲ್ಲಿನ ಜನರು ಇಲ್ಲಿನ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಈ ಸಾಂಸ್ಕೃತಿಕ ಬಾಂಧವ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ ಎಂದರು.
*ನನಗೆ ಕನ್ನಡ ವೃತ್ತಪತ್ರಿಕೆಗಳನ್ನು ಓದುವ ಹುಚ್ಚು. ದಿನಕ್ಕೆ ೭-೮ ಕನ್ನಡ ವೃತ್ತ ಪತ್ರಿಕೆಗಳನ್ನಾದರೂ ಸಮಗ್ರವಾಗಿ ಓದುತ್ತೇನೆ. ಜರ್ಮನಿಯಲ್ಲಿರುವಾಗ ಎಲ್ಲಾ ಕನ್ನಡ ವೃತ್ತಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಓದುತ್ತಿದ್ದೆ. ಅದಕ್ಕಾಗಿ ಲ್ಯಾಪ್ ಟಾಪ್ ಮತ್ತು ಅಂತರ್ಜಾಲ ಬಳಕೆಯನ್ನು ಕಲಿತೆ. ಬ್ಳಾಗಿಂಗ್ ಮಾಡೂವುದನ್ನು ಕಲಿತೆ. ಯಾವ ವಯಸ್ಸಿನಲ್ಲಾದರೂ ಏನನ್ನೂ ಬೇಕಾದರೂ ಕಲಿಯಬಹುದು. ಅದನ್ನು ಹಂಚಿಕೊಳ್ಳುವುದೂ ಕೂಡ ಸೂಕ್ತ. ಬ್ಳಾಗಿಂಗ್ ಇದಕ್ಕೆ ಒಳ್ಳೆಯ ಉದಾಹರಣೆ. ನಾವು ಹಳ್ಳಿಯಿಂದ ಬಂದವರು. ಗೊಬ್ಬರ ನೀರು ಬೀಜಗಳನ್ನು ಹಂಚಿಕೊಂಡು ಬೇಸಾಯ ಮಾಡಿದವರೆಂದರು.
* ಅಪ್ಪಗೆರೆ ತಿಮ್ಮರಾಜುರವರು, ಸಾಹಿತ್ಯದ ಜೊತೆಗೆ ಕನ್ನಡ ಜನಪದವನ್ನೂ ಅಲ್ಲಿನ ಜನಕ್ಕೆ ಪರಿಚಯಿಸುವ ಕೆಲಸವಾಗಬೇಕಿದೆಯಲ್ಲವೇ ಎಂಬ ಪ್ರಶ್ನೆಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ ವಿವೇಕ್ ರೈ ರವರು ಕರ್ನಾಟಕದ ಜನಪದ ವೈವಿಧ್ಯತೆಯನ್ನು ನೆನೆದು, ಜರ್ಮನಿಯ ಒಬ್ಬ ವಿದ್ಯಾರ್ಥಿನಿ ಐದು ವರ್ಷಗಳ ಕಾಲ ಯಕ್ಷಗಾನವನ್ನು ಅಭ್ಯಯಿಸಿ ಜರ್ಮನಿಯಲ್ಲಿ, ಯಕ್ಷಗಾನದ ಪ್ರದರ್ಶನವನ್ನು ನೀಡಿದ್ದನ್ನು ನೆನೆದರು.
*ಜರ್ಮನಿಯ ಸಾಹಿತ್ಯದ ಬಗ್ಗೆ ಕೇಳಿದ ಪ್ರಶ್ನೆಗೆ, ಇಂದು ಜಾಗತೀಕರನ ಯಾವುದೇ ಒಂದು ಪ್ರಾಕಾರದ ಸಾಹಿತ್ಯವನ್ನು ರಚಿಸಲು ಅನುವು ಮಾಡಿಕೊಡುತ್ತಿಲ್ಲ. ಭಾರತದಲ್ಲೂ ಅಷ್ಟೇ ಜರ್ಮನಿಯಲ್ಲೂ ಅಷ್ಟೆ. ಒಂದು ನಿರ್ಧಿಷ್ಟ ಪ್ರಾಕಾರದ ಸಾಹಿತ್ಯ ಹೊರ ಹೊಮ್ಮುತ್ತಿಲ್ಲ. ಎರಡೂ ಭಾಷೆಯ ಪುಸ್ತಕಗಳ ಪರಸ್ಪರ ಅನುವಾದಗಳ ಅವಶ್ಯಕತೆಯಿದೆ ಎಂದರು.
*ಡೀಮ್ಡ್ (ಸ್ವಾಯತ್ತತೆ) ವಿಶ್ವವಿದ್ಯಾಲಯಗಳ ಮಾನ್ಯತೆ ಇತ್ತೀಚಿಗೆ ಸರಿಯಾಗಿಲ್ಲ. ಒಂದು ಎರಡು ವರ್ಷ ಕಳೆದ ಕಾಲೇಜುಗಳನ್ನೆಲ್ಲ ಡೀಮ್ಡ್ ವಿಶ್ವವಿದ್ಯಾಲಯಗಳು ಎಂದು ಪರಿಗಣಿಸಿರುವುದು ತಪ್ಪು. ಐ ಐ ಟಿ ಗಳೋ, ಐ ಐ ಎಸ್ ಸಿ ಗಳೋ ಡೀಮ್ಡ್ ವಿಶ್ವವಿದ್ಯಾಲಯಗಳಾದರೆ ಅದರಲ್ಲಿ ಅರ್ಥವಿದೆ ಎಂದರು.
*ಕೇಳುಗರೊಬ್ಬರ ಪ್ರಶ್ನೆಗೆ ಲೋಹಿಯಾರವರ ಪ್ರಭಾವ ನನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಅವರ ಕೃತಿಗಳ ಅನುವಾದಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮರು ಮುದ್ರಣ ಕಾಣಬೇಕಾಗಿದೆ ಎಂದು ಮನು ಬಳಿಗಾರ್ ರವರಲ್ಲಿ ವಿನಂತಿಸಿಕೊಂಡರು.
ಸುಮಾರು ಒಂದೂವರೆ ಘಂಟೆಯ ಅವಧಿಯಲ್ಲಿ ಹೆಚ್ಚು ಹೆಚ್ಚು ವಿವೇಕಪೂರ್ಣ ಮಾತುಗಳು ಹೊರಹೊಮ್ಮಿದವು. ಅವುಗಳಲ್ಲಿ ಕೆಲವನ್ನಷ್ಟೇ ಇಲ್ಲಿ ಹಿಡಿದಿಟ್ಟಿರುವುದು.



