ಭಾವತರಂಗ –ಮುನ್ನುಡಿ | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಭಾವತರಂಗ –ಮುನ್ನುಡಿ

ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಭಾಷೆಯ ಅಗತ್ಯ ಇರುವುದು. ಈ ಭಾವನೆಗಳು ಪರಿಪೂರ್ಣತೆ ಕಾಣುವುದು ಭಾಷೆಯ ಶಬ್ಧ ಭಂಡಾರ, ಸೂಕ್ತ ಪದ ವಿನ್ಯಾಸ, ವ್ಯಾಕರಣದ ಸೂಕ್ಷ್ಮತೆ, ಮಿಗಿಲಾಗಿ ಜನ ರೂಢಿ, ಹೀಗೆ ಅನೇಕ ಹಲವು. ಇಂತಹ ಕ್ಲಿಸ್ಟ ಮಿಶ್ರಣಗಳನ್ನು ಸುಂದರವಾಗಿ ಕನ್ನಡ ಭಾಷೆ ಒಳಗೊಂಡಿದೆ.

ಒಂದು ಭಾಷೆಯ, ಪದದ ಶಬ್ದ ಹಾಗು ಅರ್ಥ ಸಾಮಾನ್ಯವಾಗಿ ಸಮ್ಮಿಲಿಸುತ್ತವೆ. ಉದಾಹರಣೆಗೆ ಕನ್ನಡದ “ಹೋಗು”, ಆಂಗ್ಲದ “ಗೋ”, ತುಳುವಿನ “ಪೋ”, ಹೀಗೆ ಎಲ್ಲವೂ ಪರ್ಯಯ ಪದ ಶಬ್ದ ಬೇರೆ ಬೇರೆಯಾದರೂ, ಎಲ್ಲಾ ಪದಗಳಲ್ಲಿ “ಓ” ಅಕ್ಷರ ಅಡಗಿದೆ. “ಓ” ಅಥವ ಯಾವುದೇ ದೀರ್ಘಾಕ್ಷರ “ಹೋಗು” ಪದದ ಪರ್ಯಾಯ ಅಗಿರುವುದು ಸಾಮಾನ್ಯವಾಗಿ ಕಂಡು ಬರುವುದು. ಹೀಗೆ ಭಾಷಾ ಸೌಂದರ್ಯ ವೃದ್ಧಿ, ಸೂಕ್ತ ಪದ ವಿನ್ಯಾಸದಿಂದ ಆಗುತ್ತದೆ ಹಾಗು ಕನ್ನಡವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಂತಹ ಹಲವು ಅಡಗಿರುವ ಗುಪ್ತ ವಿಷಯಗಳು ವ್ಯಕ್ತ ಆಗುವುದು.

ವ್ಯಾಕರಣಕ್ಕೆ ಬಂದಲ್ಲಿ, ಕನ್ನಡದಲ್ಲಿ ಹೆಚ್ಚಾಗಿ ಸಂಸ್ಕೃತದ ವ್ಯಾಕರಣ ನಿಬಂಧಗಳನ್ನು ಅಳವಡಿಸಲಾಗಿದೆ. ಆದರೂ ಕನ್ನಡಕ್ಕೆ ಅದರದ್ದೇ ಆದ ಸ್ವಂತ ವ್ಯಾಕರಣ ಇದೆ. ಉದಾಹರಣೆಗೆ ಕನ್ನಡದ ತದ್ಭವ ಸಂಧಿಯನ್ನು ಇನ್ನಿತರ ಭಾಷೆಗಳಲ್ಲಿ ಕಾಣಲು ಸಿಗದು. ಹೀಗೆ ವ್ಯಾಕರಣದ ಚೌಕಟ್ಟು ಭಾವನೆಗಳ ಅಲೆಗಳನ್ನು ಸೆರೆ ಹಿಡಿಯಲು ಸುಲಭ ಸಾಧ್ಯ ಆಗುವುದು.

ಇತ್ತೀಚೆಗೆ ನಾನು ಅಂಗಡಿಯಲ್ಲಿ “ಮೊಸರು” ಕೆಳಿದರೆ, ಅಂಗಡಿಯಾತನಿಗೆ ಪದದ ಅರ್ಥ ತಿಳಿಯದು. ಒಂದು ಭಾಷೆಯ ಜನ ರೂಢಿ, ಭಾಷೆಯ ಅಭಿವೃದ್ಧಿ ಅಥವ ಕುಂದುವಿಕೆಗೆ ಕಾರಣ. ಮಿಗಿಲಾಗಿ ಸರಿಯಾದ ಉಪಯೋಗ ಅತ್ಯಗತ್ಯ. ಇಂದು ಕನ್ನಡ ಮಾತನಾಡುವಾಗ ಆಂಗ್ಲದ ಮಿಶ್ರಣ ಇದ್ದೇ ಇರುವುದು ಸಹಜವಾಗಿದೆ. ಸರಿಯಾದ ಉಪಯೋಗ ಇಲ್ಲವಾದಲ್ಲಿ ಪದಗಳು ಅಪಾರ್ಥವೊ, ಪಾರಮಾರ್ಥವೋ, ಸಂಭವಿಸ ಬಹುದು. “ಸ್ಲಂ ಡಾಗ್ ಮಿಲಿಯನೈರ್” ಕನ್ನಡದಲ್ಲಿ “ಕೊಳಚೆ ನಾಯಿ ಸಾಹುಕಾರ”, ಅರ್ಥ ಅನರ್ಥ ಆಗುವುದು. ಇವು ಗಡಿ ಪಾರಾದ ಪದಗಳು, ಭಾಷೆಯ ಸೀಮೆಯಲ್ಲಿಲ್ಲದ ಪದಗಳು.

ಹೀಗೆ ಮುಂದಿನ ಪಯಣದಲ್ಲಿ, ಸಮರಸದ ದೋಣಿಯಲ್ಲಿ, ಭಾವನೆಯ ಪ್ರತಿ ಅಲೆಗಳನ್ನು ಸೆರೆ ಹಿಡಿಯುವ ಭಾವತರಂಗದಲ್ಲಿ.

Tagged as:


ಪ್ರತಿಕ್ರಿಯಿಸಿ