ಕನ್ನಡದಲ್ಲಿ ಬರೆಯುವಾಗ ಆಂಗ್ಲ ಪದಗಳ ಮಿಶ್ರಣ ಎಷ್ಟು ಪರಿಣಾಮಕಾರಿ? | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಕನ್ನಡದಲ್ಲಿ ಬರೆಯುವಾಗ ಆಂಗ್ಲ ಪದಗಳ ಮಿಶ್ರಣ ಎಷ್ಟು ಪರಿಣಾಮಕಾರಿ?

ಇತ್ತೀಚೆಗೆ ಬಹಳಷ್ಟು ಕನ್ನಡ ಲೇಖನಗಳನ್ನು (ಸಾಮಾನ್ಯವಾಗಿ ಪತ್ರಿಕೆಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ, ಕೆಲವು ಪುಸ್ತಕರೂಪದಲ್ಲಿ ಪ್ರಕಟವಾದ ಕಥೆ ಕಾದಂಬರಿಗಳಲ್ಲಿ ಕೂಡ) ಆಂಗ್ಲ ಪದಗಳ ಮಿಶ್ರಣ ಕಂಡು ಬರುತ್ತಿದೆ ಅಲ್ಲವೇ? ಇದು ಸಮಸ್ಯೆಯೇ? ಅಥವಾ ಉತ್ತಮ ರೂಡಿಯೇ/ಬಳಕೆಯೇ? ಈ ರೂಢಿ, ಆ ಲೇಖನಕ್ಕೆ ಮೆರುಗು ಕೊಡುತ್ತದೆಯೇ? ಅಥವಾ ಓದುವ ಪ್ರಕ್ರಿಯೆಯನ್ನು ಜಟಿಲಗೊಳಿಸುತ್ತಾ? ಅಥವಾ ಕನ್ನಡ ಭಾಷೆಯನ್ನು ನಿಸ್ಸಾರಗೊಳಿಸುತ್ತಾ? (dilute ಮಾಡುತ್ತಾ). ಇದಕ್ಕೆ ಕಾರಣಗಳೇನು – ನಾವು ಇತ್ತೀಚೆಗೆ ಮಾತನಾಡುವಾಗ ಹೆಚ್ಚಿನ ಆಂಗ್ಲ ಪದಗಳನ್ನು ಬಳಸುವುದರಿಂದ ಬರವಣಿಗೆಯಲ್ಲಿಯೂ ಅದೇ ಚಲಾವಣೆಗೆ ಬರುತ್ತದೆಯೇ? ಅಥವಾ ಇದು ಒಂದು ಆಕರ್ಷಕ ಶೈಲಿಯೇ? ಅಥವಾ ಬಹಳಷ್ಟು ಆಂಗ್ಲ ಪದಗಳಿಗೆ ಸಮರ್ಪಕ ಕನ್ನಡ ಸಮಾನಾರ್ಥಕ ಪದಗಳಿಲ್ಲವೇ? ಹೀಗೊಂದು ಚಿಂತನೆ.

ನಾವು ಕೈಲಾಸಂ ನಾಟಕಗಳನ್ನು ಓದುವಾಗ ಬಹುತೇಕ ನಾಟಕಗಳಲ್ಲಿ ಈ ಆಂಗ್ಲ ಪದಗಳ ಮಿಶ್ರಣ ಕಾಣುತ್ತೇವೆ. ಕೈಲಾಸಂ ನಾಟಕಗಳನ್ನು ಹೆಚ್ಚು ಹೆಚ್ಚು ಓದುತ್ತಾ ಹೋದಂತೆ ಇದು ಆ ನಾಟಕ ರಚನಾಕಾರನ ಶೈಲಿಯೆಂದೆನೆಸಿ, ಆ ಆಂಗ್ಲ ಪದಗಳು ಬೇಕೆಂತಲೇ ಅಲ್ಲಿನ ಹಾಸ್ಯ ಸನ್ನಿವೇಶಗಳು, ಪಾತ್ರಗಳನ್ನು ಸೃಷ್ಟಿಸಲೆಂದೇ ಬಳಕೆಯಾಗಿವೆ ಎಂದು ಅರಿತು ಅವುಗಳನ್ನು ಸ್ವಾಭಾವಿಕವಾಗಿ ಓದಿಕೊಂಡು ಹೋಗುತ್ತೇವೆ. ಕೆಲವು ತಂತ್ರಜ್ಞಾನ ಆಧಾರಿತ ಲೇಖನಗಳಲ್ಲೂ ಆಂಗ್ಲ ಪದಗಳ ಬಳಕೆ ಅನಿವಾರ್ಯ. ಆದರೆ ಕೆಲವೊಂದು ಪತ್ರಿಕಾ ಲೇಖನಗಳು, ಬ್ಳಾಗ್ ಗಳನ್ನು ಓದಬೇಕಾದರೆ ಕೆಲವೊಮ್ಮೆ ಉಪಯೋಗಿಸಲ್ಪಟ್ಟ ಆಂಗ್ಲ ಪದಗಳ ಬಳಕೆ ತಡೆಯಬಹುದಿತ್ತೇನೋ ಎಂದೆನಿಸದೆ ಇರಲಾರದು. ಅದರಲ್ಲೂ ರಾಜ್ಯದಲ್ಲಿ ಪ್ರಸಾರವಾಗುವ ಪತ್ರಿಕೆಗಳ, ಒಂದು ಓದುಗ ವರ್ಗಕ್ಕೆ ಎಷ್ಟೋ ಆಂಗ್ಲ ಪದಗಳ ಅರ್ಥ ತಿಳಿಯದೆ ಹೋಗಬಹುದು. ಇಂತಹ ತೊಂದರೆಯನ್ನು ಮೆಟ್ಟಿ ನಿಲ್ಲುವುದಕ್ಕೆ, ನಾವು ಬರೆಯುವಾಗ ನಮ್ಮ ಯೋಚನೆಯಲ್ಲಿ ಆಂಗ್ಲ ಪದಗಳೇ ಹೆಚ್ಚು ಮೂಡಿದರೂ ಆದೊಷ್ಟೂ ಆ ಎಲ್ಲಾ ಅಂಗ್ಲ ಪದಗಳನ್ನು ಕನ್ನಡೀಕರಿಸಿ ಬರೆಯುವುದೇ ಬಹಳ ಪರಿಣಾಮಕಾರಿ ಅಲ್ಲವೇ?

ಒಂದು ಯೋಚನಾ ಲಹರಿಯ ಪ್ರಕಾರ ಒಂದು ಭಾಷೆಯು ಬೆಳೆಯಬೇಕಾದರೆ, ಅದು ಇತರ ಭಾಷೆಗಳಿಂದ ಹೆಚ್ಚು ಪದಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಅಳವಡಿಸಿಕೊಂಡು, ಉಪಯೋಗಿಸಿಕೊಂಡಾಗ ಮಾತ್ರ ಸಾಧ್ಯ ಎಂಬುದಿದೆ. ಇದಕ್ಕೆ ಆಂಗ್ಲ ಭಾಷೆಯನ್ನು ಸಾಮಾನ್ಯವಾಗಿ ಉದಾಹರಿಸುತ್ತಾರೆ. ಇಂದು ಆಂಗ್ಲ ಭಾಷೆ ಹೆಚ್ಚು ಲ್ಯಾಟಿನ್, ಗ್ರೀಕ್, ಪ್ರೆಂಚ್, ಸಂಸ್ಕೃತ ಪದಗಳನ್ನು ನೇರವಾಗಿ ಕೆಲವೊಮ್ಮೆ, ಅಥವಾ ಆ ಭಾಷೆಗಳ ಪದದ ಬೇರಿನಿಂದ ಹುಟ್ಟಿದ (ಆಕರ/ತದ್ಭವ) ಪದಗಳನ್ನು ಸೇರಿಸಿಕೊಂಡಿದೆ. ಭಾಷೆ ಈ ರೀತಿ ಬೆಳೆಯುವುದು ಒಳ್ಳೆಯದೇ, ಆದರೆ ಒಂದು ಭಾಷೆಯಲ್ಲಿ ಈಗಾಗಲೇ ಪದಗಳಿದ್ದು ಅವುಗಳ ಬಳಕೆಯ ಬಗ್ಗೆ ನಮಗೆ ಅರಿವಿಲ್ಲದೇ ಇದ್ದಾಗ ಇಂಗ್ಲಿಶ್ ಭಾಷೆಯ ಪದಗಳನ್ನು ಬಳಸಿದರೆ ಮೂಲ ಭಾಷೆಯ ಎಷ್ಟೋಂದು ಪದಗಳು ಅವನತಿಯ ಕಡೆಗೆ ಸಾಗುತ್ತವಲ್ಲವೇ? ಈಗಾಗಲೇ ಕನ್ನಡ ಸಾಕಷ್ಟು ಸಂಸ್ಕೃತ, ಹಿಂದಿ, ಆಂಗ್ಲ ಪದಗಳನ್ನು ಹೇರಳವಾಗಿ ಅಳವಡಿಸಿಕೊಂಡಿದೆ. ಇದಕ್ಕೆ ಉತ್ತಮ ಉದಾಹರಣೆಗಳೆಂದರೆ ಕಾರು, ಬಸ್ಸು, ಕಾಲೇಜು ಇತ್ಯಾದಿ. ಆದರೆ ಕನ್ನಡದಲ್ಲಿ ಇರುವ ಪದಗಳನ್ನು ಆಂಗ್ಲೀಕರಿಸದೆ, ಸಮರ್ಪಕವಾಗಿ ಕನ್ನಡ ಪದಗಳನ್ನೇ ಬಳಸುವ ಕಾರ್ಯ ಆಗಬೇಕಿದೆ.

ಆಂಗ್ಲ ಭಾಷಾತಜ್ಞ ’ಎಮಿಲಿ ಡಿಕನ್ಸನ್’ ಎನ್ನುವರು ಈ ರೀತಿ ಹೇಳಿದ್ದಾರೆ ” A Word is Dead, when It is Said, Some Say.. I Say It Begins to Live that Day” ಇದನ್ನು ಭಾಷಾತಜ್ಞ ಜಿ ವೆಂಕಟಸುಬ್ಬಯನವರು ಈ ರೀತಿ ಭಾವಾನುವಾದಿಸುತ್ತಾರೆ. “ಶಬ್ದವನು ನುಡಿದೊಡನೆ ಅವಸಾನ ಹೊಂದಿತೆನ್ನುವರು.. ನುಡಿದಂದೆ ಶಬ್ದವದು ಬದುಕತೊಡಗುವುದೆಂಬೆ ನಾನು” , ಈ ನುಡಿಯಿಂದ ಗೊತ್ತಾಗುತ್ತದೆ, ಯಾವುದೇ ಭಾಷೆಯ ಸೊಗಡಿನ ಪದವನ್ನು ಬಳಸುವುದರ ಮಹತ್ವ.

ಈ ಆಂಗ್ಲ ಪದಗಳ ಬಳಕೆಯ ಕಾರಣಗಳಿಗೆ/ಸಮಸ್ಯೆಗಳಿಗೆ ಪರಿಹಾರವನ್ನು ಚರ್ಚಿಸುತ್ತಾ ಹೋದರೆ,

೧) ನಾವು ಲೇಖನವನ್ನು ಬರೆಯುವಾಗ ನಮ್ಮ ತಲೆಗೇ ಹೊಳೆಯುವುದು ಆಂಗ್ಲ ಪದಗಳೇ ಎಂದಾದರೆ, ಒಂದು ಆಂಗ್ಲ ಪದದಿಂದ ಕನ್ನಡ ಪದ ಅರ್ಥ ಹೇಳುವ ಶಬ್ದಕೋಶವನ್ನು ಉಪಯೋಗಿಸುವುದು ಒಳಿತು. ನಮ್ಮ ಕನ್ನಡ ಶಬ್ದಭಂಡಾರವೂ ಇದರಿಂದ ಹೆಚ್ಚುವುದಲ್ಲದೇ, ಈ ಶಬ್ದಗಳ ಬಳಕೆಯಿಂದ ಲೇಖನದ ಸೊಬಗು ಕೂಡ ವೃದ್ಧಿಸುವುದರಲ್ಲಿ ಸಂಶಯವಿಲ್ಲ. ಈಗ ಅಂತರ್ಜಾಲದಲ್ಲೂ ಆಂಗ್ಲ ಪದದಿಂದ ಕನ್ನಡ ಅರ್ಥ ಕೊಡಬಲ್ಲ ಶಬ್ದಕೋಶಗಳಿರುವುದು ಒಳ್ಳೆಯ ಬೆಳವಣಿಗೆ. (http://baraha.com/kannada/index.php / http://kannadakasturi.com/).

೨) ಇದು ಒಂದು ಆಕರ್ಷಕ ಶೈಲಿ ಎಂದು ತಿಳಿದಿದ್ದರೆ, ಒಮ್ಮೆ ನಿಮ್ಮ ಓದುಗ ವರ್ಗ ಯಾವುದು ಎಂದು ಯೋಚಿಸಬೇಕಾಗುತ್ತದೆ. ನಿಮ್ಮ ಓದುಗ ವರ್ಗದ ಕೆಲವರಿಗೆ ಆಂಗ್ಲ ಪದಗಳನ್ನಿ ಅರ್ಥೈಸಿಕೊಳ್ಳುವುದು ಕಷ್ಟ ಎಂದಾದರೆ ನಿಮ್ಮ ಶೈಲಿಯನ್ನು ಬದಲಿಸಿಕೊಳ್ಳುವುದು ಒಳಿತು. ಒಂದೊಮ್ಮೆ ನಿಮ್ಮ ಓದುಗ ವರ್ಗವೆಲ್ಲರಿಗೂ ಆಂಗ್ಲ ಪದಗಳ ಅರ್ಥ ತಿಳಿದುಕೊಳ್ಳುದು ಕಷ್ಟವೇನೆಲ್ಲ ಎಂದಾದರೂ, ಈ ಬಳಕೆ ಓದುಗರಿಗೆ ಇಷ್ಟವಾಗುತ್ತದೆಯೇ? ಎಂಬುದರ ಸಮಗ್ರ ಅಭಿಪ್ರಾಯ ತಿಳಿಯಬೇಕು. ಅಭಿಪ್ರಾಯ ಋಣಾತ್ಮಕವೆನಿಸಿದಲ್ಲಿ ಕನ್ನಡ ಪದಗಳನ್ನು ಬಳಸುವುದೇ ಒಳಿತು.

೩) ಇನ್ನು ಕೆಲವೊಮ್ಮೆ ನಮಗೆ ಆಂಗ್ಲ ಭಾಷೆಯ ಪದಗಳಿಗೆ ಸಮರ್ಪಕ ಕನ್ನಡ ಪದಗಳು ಸಿಗದೆ ಹೋಗಬಹುದು. ಆಗ ಆ ಪದಗಳನ್ನು ಬಳಸಬಹುದು, ಅಥವಾ ಆ ಪದಗಳಿಗೆ ಹೊಸದಾದ ಕನ್ನಡ ಪದವನ್ನು ನಾಮಕರಣ ಮಾಡುವ ಪ್ರಯತ್ನ ಕೂಡ ಮಾಡಬಹುದು. ಆ ಪದ ಅಂದಿನಿಂದ ತನ್ನ ಜೀವನವನ್ನು ಪ್ರಾರಂಭಿಸಬಹುದು. ಉದಾಹರಣೆಗೆ ಒಮ್ಮೆ ಶ್ರೀವತ್ಸ ಜೋಷಿಯವರು culprit ಎಂಬುದಕ್ಕೆ ಖಳಪಿತೃ (ಇಲ್ಲಿ ಅಪರಾಧಿ ಅಥವಾ ದೋಷಿ ಎಂಬ ಪದ ಅಷ್ಟು ಸಮರ್ಪಕವಲ್ಲ ಎಂದೆನಿಸುತ್ತದಲ್ಲವೇ?) ಎಂಬ ಪದವನ್ನೂ Continental Food ಗೆ ಖಂಡೋಪಹಾರ ಎಂತಲೂ ಹೊಸ ಪದವನ್ನು ಹುಟ್ಟು ಹಾಕಿದ ನೆನಪಿದೆ. ಇದಕ್ಕೆ ಇನ್ನೂ ಉತ್ತಮ ಸಮಾನಾರ್ಥಕ ಪದಗಳಿದ್ದರೂ ಇರಬಹುದೇನೋ ಕನ್ನಡದಲ್ಲಿ, ನಮ್ಮ ಗಮನಕ್ಕೆ ಬಂದಿರದೆ ಇರಬಹುದೇ? ಆದರೆ ಈಗಾಗಲೇ ಇರುವ ಪದಗಳ ಬಳಕೆ ಹೆಚ್ಚಾಗಬೇಕಿದೆ. ಉದಾಹರಣೆಗೆ Infimation technology ಯನ್ನು ಮಾಹಿತಿ ತಂತ್ರಜ್ಞಾನ, engineer ಅನ್ನು ಅಭಿಯಂತರ ಹೀಗೆ ಬಳಸುವುದುರಿಂದ ಕನ್ನಡ ಶಬ್ದಕೋಶ ಸಮೃದ್ಧಿಯಾಗುವುದಲ್ಲದೇ, ಬರೆಯುವ ಲೇಖನದ ತೂಕವೂ ಹೆಚ್ಚಾಗುವುದು.

೪) ಹಳೆಗನ್ನಡ ಪದಗಳಿಗೆ ಅರ್ಥ ಹುಡುಕುವ ಕಾಲವೊಂದಿತ್ತು. ಈಗ ಕೆಲವು ಶ್ರೇಷ್ಟ ಕಾದಂಬರಿಕಾರರ ಪುಸ್ತಕಗಳನ್ನು ಓದುವಾಗ, ಎಷ್ಟೋ ನವ್ಯ ಕನ್ನಡ ಪದಗಳ ಅರ್ಥ ನಮ್ಮ ತಲೆಗೆ ಸಿಕ್ಕುವುದೇ ಇಲ್ಲ. ಈ ಶಬ್ದ ದಾರಿದ್ರ್ಯಕ್ಕೆ ನಾವು ಬೆಳೆದು ಬಂದ ವಾತಾವರಣವನ್ನೂ, ನಾವು ಒದಿದ ಮಾಧ್ಯಮವನ್ನೂ ದೂರಬಹುದಾದರೂ, ಶಬ್ದಸಂಪತ್ತನ್ನು ವೃದ್ಧಿಸಿಕೊಳ್ಳುವ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡಬೇಕಾದ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ, ಅಥವಾ ಶಿವರಾಮ ಕಾರಂತರು ಸಂಪಾದಿಸಿರುವ ಅಥವಾ ಜಿ ವೆಂಕಟಸುಬ್ಬಯ್ಯನವರ ಕನ್ನಡ – ಕನ್ನಡ ಅರ್ಥಕೋಶವನ್ನು ಮನೆಯಲ್ಲಿಟ್ಟು ಸಂದೇಹ ಬಂದಾಗೆಲ್ಲ ಇವುಗಳನ್ನು ಅಧ್ಯಯನ ಮಾಡಿ ನಮ್ಮ ಶಬ್ದಭಂಡಾರವನ್ನು ಒಳ್ಳೆಯ ಸ್ಥಿತಿಗೆ ತಂದುಕೊಳ್ಳಬೇಕೆಂದೆನಿಸುತ್ತಿದೆ.

ಹೆಸರಾಯಿತು ಕರ್ನಾಟಕ.. ಉಸಿರಾಗಲಿ ಕನ್ನಡ.. ಎಂಬ ಚೆನ್ನವೀರಕಣವಿಯವರ ಕವನದ ಸಾಲು, ನಾವು ನಮ್ಮ ಸಂಭಾಷಣೆ, ಬರವಣಿಗೆ ಗಳಲ್ಲಿ ಹೆಚ್ಚು ಹೆಚ್ಚು ಅಚ್ಚ ಕನ್ನಡದ ಬಳಕೆಯಾದಂತೆ, ಅರ್ಥಗರ್ಭಿತವಾಗುತ್ತಾ ಹೋಗುತ್ತದೆ.



4 ಪ್ರತಿಕ್ರಿಯೆಗಳು

  1. ಚೆನ್ನಾಗಿದೆ. ನೀವ೦ದಿದ್ದು ನಿಜ

  2. ಸರ್
    ಯಾವುದೇ ಭಾಷೆ ತನ್ನಷ್ಟಕ್ಕೆ ತಾನು ಪರಿಪೂರ್ಣವಲ್ಲ. ಒಂದು ಭಾಷೆ ಬೆಳೆಯಬೇಕಾದರೆ ಕೊಡು-ಕೊಳ್ಳುವಿಕೆ ಅತ್ಯಗತ್ಯ ಪ್ರಕ್ರಿಯೆ. ಅದನ್ನು ಸ್ವೀಕರಣ ಎನ್ನುತ್ತಾರೆ. ಎಲ್ಲಾ ಪದಗಳಿಗೂ ಪರ್ಯಾಯ ಸೃಷ್ಟಿ ಮಾಡುವುದು ಬಹಳ ಕಷ್ಟ. ಹಾಗೆ ಮಾಡಿದರೆ ಅದು ಸಾರ್ವತ್ರಿಕವಾಗುವುದಿಲ್ಲ. ಆದ್ದರಿಂದ ಅಗತ್ಯ ಬಿದ್ದಲ್ಲಿ ಬೇರೆ ಭಾಷೆಯ ಪದಗಳನ್ನು ಹಾಗೇ ಬಳಸಿದರೆ ಅದು ಖಂಡಿತಾ ದೋಷವಲ್ಲ. ಕಾಲಾಂತರದಲ್ಲಿ ಆ ಪದಗಳೂ ಕನ್ನಡದವೇ ಆಗಿ ಹೋಗುತ್ತವೆ. ಉದಾಹರಣೆಗೆ, ನೋಡಿ. ಸೋಪ್ ಎಂಬುದು ಇಂಗ್ಲಿಷ್ ಪದ ಎಂದು ಯಾರಾದರೂ ಅದಕ್ಕೆ ಪರ್ಯಾಯವಾಗಿ ಸಾಬೂನು ಎಂಬ ಪದ ಬಳಸಿದರೆ! ಆ ಸಾಬೂನು ಎಂಬ ಪದವೂ ಬೇರೆ ಭಾಷಯದೇ. ಈಗ ೆಷ್ಟೋ ಜನಕ್ಕೆ ಕಾರು ಬಸ್ಸು ಎಂಬ ಪದಗಳು ಇಂಗ್ಲಿಷ್ ಪದಗಂಎಂದು ತಕ್ಷಣ ಹೊಳೆಯುವುದೇ ಇಲ್ಲ. ೀ ರೀತಿಯ ಬೇರೆ ಭಾಷೆಯ ಪದಗಳನ್ನು ನಮ್ಮ ಕನ್ನಡದ ಪದಗಳನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆ (ಎಲ್ಲಾ ಭಾಷೆಗಳಲ್ಲೂ) ಆದಿಯಿಂದಲೂ ಇದೆ. ಅಂತಹ ಪದಗಳನ್ನು ಅನ್ಯದೇಶ್ಯ ಎಂದು ಕರೆಯುತ್ತಾರೆ. ಅದು ಖಂಡಿತಾ ದೋಷವಲ್ಲ.

  3. ಪರಾಂಜಪೆಯವರೆ,

    ಚಿಂತನೆಯನ್ನು ಅನುಮೋದಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  4. ಸತ್ಯನಾರಾಯಣರವರೇ,

    “ಯಾವ ಭಾಷೆಯೂ ತನ್ನಷ್ಟಕ್ಕೇ ಪರಿಪೂರ್ಣವಲ್ಲ”, ನೀವು ಹೇಳಿದ ಮಾತು ಅಕ್ಷರಶಃ ನಿಜ. “ಎಲ್ಲಾ ಪದಗಳಿಗೂ ಪರ್ಯಾಯ ಸೃಷ್ಟಿ ಮಾಡುವುದು ಬಹಳ ಕಷ್ಟ. ಹಾಗೆ ಮಾಡಿದರೆ ಅದು ಸಾರ್ವತ್ರಿಕವಾಗುವುದಿಲ್ಲ.” ಇದೂ ಸಹ ನಿಜ. ಆದರೆ ಕೆಲವರ ಸೃಜನೆಶೀಲತೆಯಿಂದ ಪರ್ಯಾಯ ಕನ್ನಡ ಸೃಷ್ಟಿಯಾದಾಗ, ಆ ಪದಗಳನ್ನು ಹೆಚ್ಚು ಹೆಚ್ಚು ಬಳಸುತ್ತಾ ಹೋದಂತೆ ಆ ಪದಗಳು ಸಾರ್ವತ್ರಿಕವಾಗಬಹುದೇನೋ ಒಂದು ದಿನ, ಎಂಬು ನನ್ನ ಸಂಶಯ, ಮತ್ತು ಆಗಬೇಕೆಂಬುದು ಆಶಯ. ಕಷ್ಟವಾದರೂ ಅಸಾಧ್ಯವೇನೆಲ್ಲ ಎಂಬುದು ನನ್ನ ನಂಬಿಕೆ. ನೀವು ಹೇಳಿದಂತೆ ಕೆಲವು ಬೇರೆ ಭಾಷೆಯ ಪದಗಳನ್ನು ಕನ್ನಡದಲ್ಲಿ ಬಳಸಿಕೊಳ್ಳುವುದು ದೋಷವೇನಲ್ಲ.

    ಆದರೆ ಈಗಾಲೇ ಕನ್ನಡ ಪದಕೋಶದಲ್ಲಿ ಲಭ್ಯವಿರುವ ಪದಗಳನ್ನು ಬಳಸದೆ ಬೇರೆ ಭಾಷೆಯ ಪದಗಳನ್ನು ಅಷ್ಟು ಸರಿಯಿಲ್ಲವೇನೋ ಎಂಬುದು ನನ್ನ ಅನಿಸಿಕೆ. ಉದಾಹರಣೆಗೆ ಸಾಮಾನ್ಯವಾಗಿ ಪತ್ರಿಕಾ ಲೇಖನಗಳಲ್ಲಿ, ’ನ್ಯೂಸ್’ ಎಂದು ಸಾಮಾನ್ಯವಾಗಿ ಬಳಸುವುದು ವಾಡಿಕೆಯಾಗಿದೆ. ಅಲ್ಲಿ ಸುದ್ದಿ ಎಂದೇ ಬರೆದರೆ ಬರೆದ ಲೇಖನಕ್ಕೆ ಹೆಚ್ಚಿನ ಮೆರುಗು ಎಂದೆನಿಸುತ್ತದೆ. ಇನ್ಸ್ಪಿರೇಶನ್ ಎಂಬುದನ್ನು ಕೂಡ ಎಷ್ಟೋ ಜನ ಹಾಗೇ ಬರೆಯುವುದನ್ನು ನೋಡಿದ್ದೇನೆ. ಇನ್ನು ಅಭೀಪ್ಸೆ, ಅಭಿದಾನ ಇಂತಹ ಪದಗಳ ಬಳಕೆ ಇತ್ತೀಚೆಗೆ ಕಂಡು ಬರುವುದೇ ಇಲ್ಲ. ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂಬುದೇ ನನ್ನ ಆಶಯ.

    ನಿಮ್ಮ ಚಿಂತನೆಯನ್ನು ಇಲ್ಲಿ ಚರ್ಚಿಸಿದ್ದಕ್ಕೆ ಅನಂತ ಧನ್ಯವಾದಗಳು.

ಪ್ರತಿಕ್ರಿಯಿಸಿ