ಹಿರಿಯರನ್ನು ವಿರೋಧಿಸಬಾರದೆ? | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಹಿರಿಯರನ್ನು ವಿರೋಧಿಸಬಾರದೆ?

ಇದು ಯುಗಗಳಿಂದ ನಡೆದು ಬಂದಿರುವ ಚರ್ಚೆ. ಹಿರಿಯರು, ಹೆತ್ತವರು, ಗುರುಗಳನ್ನು ವಿರೋಧಿಸಬಾರದೆಂಬುದು. ಇಂದಿಗೆ ಅದು ಪ್ರಸ್ತುತವೇ? ಇಲ್ಲಿ ನಾನು ಈ ವಿಷಯವನ್ನು ಸಾರ್ವತ್ರಿಕ ಎನ್ನುವುದಿಲ್ಲ. ಒಂದು ಸೂಕ್ಷ್ಮ ಉದಾಹರಣೆಯೊಂದಿಗೆ, ಮತ್ತು ಆ ಉದಾಹರಣೆಯ ಚೌಕಟ್ಟಿನಲ್ಲೇ ಚರ್ಚಿಸುತ್ತೇನೆ.

ನಿಹಾರಿಕ ಬಹಳ ಜಾಣೆ. ಅಪ್ಪ ಅಮ್ಮಂದಿರೆಂದರೆ ಬಹಳ ಪ್ರೀತಿ. ಅವಳ ಹೆತ್ತವರಿಗೂ ಮಗಳನ್ನು ಕಂಡರೆ ಬಹಳ ಪ್ರೀತಿ. ತಮ್ಮ ಜೀವನ ಎಷ್ಟೋ ಆಸೆಗಳನ್ನು ಬದಿಗಿಟ್ಟು ಮಗಳನ್ನು ಹೆಚ್ಚು ಓದಿಸಿದ್ದಾರೆ. ಮಗಳಿಗೆ ೨೫ ತುಂಬಿದೆ. ಅಪ್ಪ ಅಮ್ಮನಿಗೆ ಮಗಳಿಗೆ ಮದುವೆ ಮಾಡಿಸಬೇಕೆಂಬ ಬಯಕೆ.ಮಗಳಿಗೆ ಅದರ ವಿರೋಧವೇನಿಲ್ಲ. ಆದರೆ ಹೆತ್ತವರು ಮಗಳಿಗೆ ಚೆನ್ನಾಗಿ ಓದಿಸಿದರೇ ಹೊರತು ತಾವು ಓದಿ ಹೆಚ್ಚು ತಿಳಿದುಕೊಳ್ಳಲಿಲ್ಲ. ಜಾತಿಯ ಕಟ್ಟುಪಾಡಿನಿಂದ ಹೊರಬರಲು ಆಗುತ್ತಿಲ್ಲ.ಮಗಳಿಗೆ ತನ್ನ ಆಯ್ಕೆಗೆ ತಕ್ಕಂತೆ ವರನನ್ನು ಆರಿಸಿಕೊಳ್ಳುವ ಸ್ವಾತಂತ್ರ ಕೊಟ್ಟಿದ್ದರೂ, ತನ್ನ ಜಾತಿಯಲ್ಲೇ ಹುಡುಗನನ್ನು ಹುಡುಕಿಕೊಳ್ಳಬೇಕೆಂಬ ನಿಯಮ. ಅವರಿಗೂ ಜಾತಿ ಕಟ್ಟುಪಾಡುಗಳ ಬಗ್ಗೆ ಹೆಚ್ಚು ತಿಳಿಯದು. ಆದರೂ ಅಕ್ಕಪಕ್ಕದವರು, ಬಂಧುಗಳು ಏನೆಂದಾರು ಎಂಬ ಭಯ? ಇಲ್ಲಿ ಜಾತಿ ಕಟ್ಟುಪಾಡಿಗಿಂತ, ಒಂದು ಅಜ್ಞಾನದ ಮಾನಸಿಕ ಕಟ್ಟುಪಾಡು ಎನ್ನಬಹುದು.ಹುಡುಗಿ ಹೆಚ್ಚು ತಿಳಿದುಕೊಂಡವಳು. ಜಾತಿ ಕಟ್ಟುಪಾಡುಗಳ ಮೇಲೆ ನಂಬಿಕೆ ಸತ್ತು ಹೋಗಿ ವರ್ಷಗಳಾಗಿವೆ. ಇನ್ನು ವ್ಯಯಕ್ತಿಕವಾಗಿ ಆಲೋಚಿಸುವ ಮನಸ್ಸು, ವ್ಯಕ್ತಿತ್ವ.ಇತರರು ಏನೆನ್ನುತಾರೆ ಎಂಬ ಯೋಚನೆಗಳೆಲ್ಲಾ ಇಲ್ಲವೇ ಇಲ್ಲ. ಈಗಾಗಲೇ ೧೦-೧೫ ವರಗಳ ಸಂದರ್ಶನವಾಗಿ ನೋಡಿ ಯಾರೂ ಒಪ್ಪಿಗೆಯಾಗಿಲ್ಲ.ಪ್ರದರ್ಶನ ಮಾಡಿಕೊಳ್ಳಲು ಹಿಂಸೆ. ಈಗ ಹುಡುಗಿಯ ಮನಸ್ಸು ಗೊಂದಲಮಯವಾಗಿದೆ. ಯಾರೋ ಕಛೇರಿಯಲ್ಲಿ ಇಷ್ಟವಾದ ವರ ತಾನಾಗಿಯೇ ಕೇಳಿದಾಗ, ಬೇರೆ ಜಾತಿಯವನೆಂದು ಮನೆಯವರು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ನಿರಾಕರಿಸಿದ್ದು ಸರಿಯೇ? ಅಪ್ಪ ಅಮ್ಮನಿಗೆ ಈ ಸಂದರ್ಶನಗಳು, ಈ ಪ್ರಕ್ರಿಯೆ/ಪದ್ಧತಿ ನನಗೆ ಇಷ್ಟ ಇಲ್ಲ ಎಂದು ನೇರವಾಗಿ, ಖಡಾಖಂಡಿತವಾಗಿ ಹೇಳಿಬಿಡುವುದೇ? ಅವರ ಮನಸ್ಸನ್ನು ನೋಯಿಸುವುದು ಸರಿಯೇ?

ಇದು ವರ್ತಮಾನದ ಹಿಂಸೆಯಾದರೆ, ಭವಿಷ್ಯತ್ ಕಾಲದಲ್ಲಿ ಏನಾಗಬಹುದು ಎಂಬುದನ್ನೂ ಚಿಂತಿಸಿದಾಗ

ಎಲ್ಲಾ ರೀತಿಯ ಸಾಧ್ಯತೆಗಳನ್ನು ಅವಲೋಕಿಸಿದಾಗ, ಹುಡುಗಿ ಇಷ್ಟ ಪಟ್ಟು ಮದುವೆಯಾದರೂ, ಅಥವಾ ಹಿರಿಯಯ ಒತ್ತಡಕ್ಕೆ ಮಣಿದು ಮದುವೆಯಾದರೂ, ಸಂಬಂಧ ಅರಳುವ ಅಥವ ಹಳಸುವ ಎರಡೂ ಸಾಧ್ಯತೆಗಳಿವೆ. ಹುಡುಗಿ ಇಷ್ಟ ಪಟ್ಟು ಮದುವೆಯಾದಾಗ ಸಂಬಧ ಹಳಸುವ ಸಾಧ್ಯತೆ ಸ್ವಲ್ಪ ಕಡಿಮೆ ಎನ್ನಬಹುದು. ಕಾರಣ ಹುಡುಗ ಮತ್ತು ಹುಡುಗಿ ತಮ್ಮ ಮನಸ್ಸುಗಳು, ಅಲೋಚನೆಗಳು, ವ್ಯಕ್ತಿತ್ವಗಳು ಹೊಂದಿಕೆಯಾಗಿರುತ್ತವೆಯೇ ಎಂದು ತಿಳಿದುಕೊಳ್ಳುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಂಡಿರುತ್ತಾರೆ.(ಬರೀ ಆಕರ್ಷಣೆಯಿಂದಲೇ ತೆಗೆದುಕೊಂಡ ಆತುರದ ನಿರ್ಧಾರ ಅಲ್ಲ ಎಂದೆಣಿಸಿ ಅವಲೋಕಿಸಿದಾಗ). ೨ – ೩ ದಿನ ಸಂದರ್ಶನಗಳಲ್ಲಿ, ಸಮಯ ಹಿತವಾಗಿರುವಾಗ ಸುಮ್ಮನೆ ಹಿತವಾದ ಮಾತುಗಳನ್ನಾಡಿ ಬೆಸೆದುಕೊಂಡಿರುವ ಸಂಬಂಧ ಅದಾಗಿರುವುದಿಲ್ಲ. ಎಷ್ಟೋ ಪ್ರಕ್ಷುಬ್ಧ ಪರಿಸ್ಥಿತಿಗಳನ್ನು ಮೀರಿದ ಸಂಬಂಧವಾಗಿರುತ್ತದೆ. ಆ ಸಂಬಧದ ತಳಹದಿ ಬಹಳಷ್ಟು ಸಮಯ ಪರಸ್ಪರ ಗೌರವದಿಂದ ಬೆಸೆದಿರುತ್ತದೆ. ಹೀಗಿರುವಾಗ ಮದುವೆಯಾದ ನಂತರ ಒದಗುವ ವಿಷಮ ಪರಿಸ್ಥಿತಿಗಳನ್ನು ನಿಭಾಯಿಸುವ ಸಮತೋಲನ ಮನಸ್ಥಿತಿ, ಹೊಂದಾಣಿಕೆ ಇಬ್ಬರಲ್ಲೂ ಇರುತ್ತದೆ. ಒಂದು ಪಕ್ಷ ಸಂಬಧ ವಿಕೋಪಕ್ಕೆ ತಿರುಗಿ ಮುರಿದು ಬಿದ್ದರೂ, ಬೇರೆಯಾಗಲು ಬೇರೆ ಯಾವುದೇ ಬಾಹ್ಯ ಒತ್ತಡಗಳು, ಕಟ್ಟುಪಾಡುಗಳಿರುವುದಿಲ್ಲ. ಏಕೆಂದರೆ ಎರಡೂ ಆಯ್ಕೆಗಳು ವ್ಯಯಕ್ತಿವಾದದ್ದು. ನಂತರದಲ್ಲಿ ದುಃಖ, ನೋವುಗಳೂ ಕೂಡ ಕಡಿಮೆಯಿರುತ್ತದೆ.

ಹಿರಿಯರ ಒತ್ತಡದಿಂದ ಮದುವೆಯಾದ ಸಾವಿರಾರು ಸಂಬಧಗಳೂ ಇಂದು ಬಹಳ ಆನಂದವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ನಮಗೆ ನಂಬಿಕೆಯಿಲ್ಲದಿದ್ದರೂ ಸುಮ್ಮನೆ ಹತ್ತವರನ್ನು ನೋಯಿಸಬಾರದೆಂದು, ಒತ್ತಡಕ್ಕೆ ಮಣಿದು ಮದುವೆಯಾಗಿ, ಒಂದು ಪಕ್ಷ ಆ ಸಂಬಂಧ ಹಾಳಾದಾಗ ಸಂಧವನ್ನು ತ್ಯಜಿಸುವುದು ಅಷ್ಟು ಸುಲಭವಾಗಿರುವುದಿಲ್ಲ. ಸಂಬಧಿಕರು, ಬಂಧು-ಬಳಗ ಎಲ್ಲರ ಹಸ್ತಕ್ಷೇಪ ಪ್ರಾರಂಭವಾಗುತ್ತದೆ. ವ್ಯಯಕ್ತಿಕ ನಿಲುವುಗಳಿಗೆ ಬೆಲೆ ಕಡಿಮೆಯಾಗುತ್ತದೆ. ಎಲ್ಲರೂ ಉಚಿತ ಉಪದೇಶ ಕೊಡುವವರೇ! ಆಗ ದುಃಖ ಕೊರಗುಗಳು ಹೆಚ್ಚಾಗಬಲ್ಲವು. ಮತ್ತದೇ ಸುತ್ತಮುತ್ತಲಿನ ಜನ ಏನಂದಾರು ಎಂಬ ಸಾಮಾಜಿಕ ಅಜ್ಞಾನದ ಕಟ್ಟುಪಾಡಿಗೆ ಬಲಿಯಾಗಿ ಹೆಚ್ಚಿನ ತೊಂದರೆಗಳಿಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚು.

ವ್ಯಯಕ್ತಿಕ ಸಂತೋಷವನ್ನು ಹಾಳುಗೆಡವಿಕೊಂಡು, ಇತರರ ಸಂತೋಷವೇ ಮುಖ್ಯ ಎಂಬುದು ಆದರ್ಶವಾಗಿ ಕಂಡುಬಂದರೂ, ನೋವು ಮನಸ್ಸಿನಲ್ಲಿ ಸ್ತುಪ್ತವಾಗಿ ಕೊಳೆಯುತ್ತಾ ಹೋಗುತ್ತದೆ. ನಾವು ಸಂತೋಷದಿಂದ ಇರದೆ, ಬೇರೆಯವರಿಗೆ ಸಂತೋಷವನ್ನು ಹಂಚುತ್ತೇವೆಂಬುದು ಕೇವಲ ಭ್ರಮೆಯಷ್ಟೇ. ಬೇರೆಯವರು ನಮ್ಮ ಎದುರಿಗೆ ಸಂತೋಷದಿಂದ ಕಂಡುಬಂದರೂ, ಅದು ಕನಿಕಾರವಾಗಿರುತ್ತದೇ ಹೊರತು ಅದು ಸಹಜವಾದುದಲ್ಲ.

ಸಾರಾಂಷ ಇಷ್ಟೇ. ಕೆಲವೊಮ್ಮೆ ನಮ್ಮ ಹಿರಿಯರ, ಹೆತ್ತವರ, ಗುರುಗಳ ನಿರ್ಧಾರಗಳು (ನಮ್ಮ ಜೀವನಕ್ಕೆ ಸಂಬಧಪಟ್ಟವು) ತಪ್ಪು ಎಂದೆನಿಸಿದಾಗ ಅವುಗಳನ್ನು ಒಲ್ಲದ ಮನಸ್ಸಿನಿಂದ ಒಪ್ಪಿ ಮನಸ್ಸನ್ನು ಹಿಂಸಿಕೊಳ್ಳುವುದು ಸರಿಯಲ್ಲ. ಮೊದಲು ತಿಳಿ ಹೇಳಬಹುದು, ಅದಕ್ಕೆ ಒಪ್ಪದೇ ಹೋದಲ್ಲಿ ವಿರೋಧಿಸುವುದರಲ್ಲಿ ತಪ್ಪೇನಿಲ್ಲ. ನಾವು ಹಿಂಸೆಯಿದ ಬದುಕಿದಾಗ, ನಮ್ಮ ಮುಂದಿನ ಪೀಳಿಗೆ ಪ್ರೀತಿಯನ್ನು ತೋರುವುದು ಕಷ್ಟ. ಆ ಹಿಂಸೆಯನ್ನೇ ಅವರ ಮೇಲೂ ಹೇರಲು ಪ್ರಯತ್ನಿಸುತ್ತೇವೆ. ಆರೋಗ್ಯಕರ ಮನಸ್ಸಷ್ಟೇ ಆರೋಗ್ಯಕರ ಸಮಾಜವನ್ನು ಕಟ್ಟಬಹುದು. ವೈಯಕ್ತಿಕ ಸಂತೋಷಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟು ಆದರ್ಶಗಳಿಗೆ ನಂತರದ ಪ್ರಾಶಸ್ತ್ಯದ ಅಗತ್ಯವಿದೆ ಇಂದು.

Tagged as: ,


2 ಪ್ರತಿಕ್ರಿಯೆಗಳು

  1. ವ್ಯಯಕ್ತಿಕ ಅಲ್ಲ. ವೈಯಕ್ತಿಕ!

  2. ರವೀಶ ಧನ್ಯವಾದಗಳು. ತಪ್ಪನ್ನು ತಿದ್ದಲಾಗಿದೆ.

ಪ್ರತಿಕ್ರಿಯಿಸಿ