ಫೆಮ್ಟೋಸೆಲ್ ನಿಮಗಿದು ಗೊತ್ತೇ?

ಚಿತ್ರ ಮೂಲ - ಸ್ಟಾರೆಂಟ್ ನೆಟ್ವರ್ಕ್ಸ್
೨ ನೇ ತಲೆಮಾರಿನ ಮತ್ತು ೩ ನೇ ತಲೆಮಾರಿನ ತಂತಿರಹಿತ ದೂರಸಂಪರ್ಕ ಸೇವೆಯಲ್ಲಿ ಬಹು ದೊಡ್ಡ ಗುಣಮಟ್ಟದ ತೊಂದರೆ ಎಂದರೆ ಸಿಗ್ನಲ್ ನದ್ದು. ಎರಡೂ ಪೀಳಿಗೆಯ ಸೇವೆಗಳಲ್ಲಿ ಮೊಬೈಲ್ ಉಪಕರಣದಿಂದ, ಬಿ ಟಿ ಎಸ್ (Base transciever system/ Base Station Reciever/Node-B – ಸರಳವಾಗಿ ಕಣ್ಣಿಗೆ ಕಾಣುವಂತೆ Antenna Tower) ನ ವರೆಗೆ, ಒಂದು ನಿರ್ಧಿಷ್ಟ ತರಂಗಾಂತರದಲ್ಲಿ ವಿದ್ಯುತ್ ತರಂಗಳನ್ನು ಹರಿಸುವುದೇ ಸಂಪರ್ಕ ಸೇತುವೆ. ಧ್ವನಿಯನ್ನು ಈ ತರಂಗಗಳ ಮೇಲೆ ಹಾಯಿಸುವುದು ಈ ತಂತ್ರಜ್ಞಾನದ ಹಿರಿಮೆ. ಉಳಿದ ಸಂಪರ್ಕಗಳೆಲ್ಲಾ ತಂತಿಯಿಂದ ಬೆಸೆದವುಗಳು. ಆದುದರಿಂದ ಸಂಚಾರಿ ದೂರವಾಣಿ ಉಪಕರಣ , ಬಿ ಟಿ ಎಸ್ ನಿಂದ ದೂರವಾದಂತೆ, ಅಥವಾ ಮೊಬೈಲ್ ಫೋನ್ ಮತ್ತು ಬಿ ಟಿ ಎಸ್ ನಡುವೆ ಅಡೆತಡೆಗಳು ಹೆಚ್ಚಾದಂತೆ (ಮನೆ, ದೊಡ್ಡ ದೊಡ್ಡ ಕಟ್ಟಡಗಳ ಒಳಗೆ) ಅದರ ಸಿಗ್ನಲ್ ಹಿಡಿದುಕೊಳ್ಳುವ ಶಕ್ತಿ (signal reception power) ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಲೇ ಹಲೋ .. ಹಲೋ .. ಕೇಳಿಸ್ತಾ ಇಲ್ಲಾ.. ಸ್ವಲ್ಪ ಹೊರಗೆ ಬನ್ನಿ.. ಕಟ್ ಆಯ್ತು .. ಇತ್ಯಾದಿ ತೊಂದರೆಗಳು.
ಈ ತೊಂದರೆಯನ್ನು ನೀಗಿಸುವ ಪ್ರಥಮ ಉದ್ದೇಶದಿಂದ ಮತ್ತು ಮತ್ತಿತರ ವ್ಯವಾಹಾರಿಕ ಉದ್ದೇಶದಿಂದ ಫೆಮ್ಟೋಸೆಲ್ ಅಥವಾ ಹೋಮ್-ನೋಡ್ ಬಿ ಎಂಬ ಹೊಸ ಉತ್ಪನ್ನ ಯೂರೋಪ್ ಮತ್ತು ಉತ್ತರ ಅಮೇರಿಕಾಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲು ಪ್ರಥಮ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಸಜ್ಜಾಗಿದೆ. (ಭಾರತದಲ್ಲಿ ಇನ್ನೂ ೩ ಪೀಳಿಗೆಯ ತಂತ್ರಜ್ಞಾನಕ್ಕೆ ತಂರಂಗಾಂತರದ ಹಾರಾಜು ಪ್ರಕ್ರಿಯೆಗೇ ಕಾಲ ಕೂಡಿ ಬಂದಿಲ್ಲ! ಇನ್ನು ಫೆಮ್ಟೊ ಸೆಲ್ ಗಳು ಇಲ್ಲಿಗೆ ಬರುವುದರೊಳಗೆ ಹೊರದೇಶಗಳಲ್ಲಿ ಅವು ಹಳೆಯದಾಗಿಬಿಟ್ಟಿರುತ್ತವೆ!).
ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ.
ಈ ಫೆಮ್ಟೋಸೆಲ್ ಸರಳ ಪದಗಳಲ್ಲಿ ಒಂದು ಸಣ್ಣ ಡಬ್ಬ. ಮನೆಗೆ ಒಂದು ಫೆಮ್ಟೋಸೆಲ್ ಡಬ್ಬವನ್ನು ತಂದು ಇಡಬೇಕು.ಈ ಸಣ್ಣ ಡಬ್ಬ ಬಾಹ್ಯ ನೆಟ್ ವರ್ಕ್ ಗಳಿಗೆ ಸಂಪರ್ಕ ಸಾಧಿಸಲು ನಿಮ್ಮ ಮನೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆ ಇರಬೇಕು. ಆದುದರಿಂದ ಇದನ್ನು ಐ – ಪಿ ಬ್ಯಾಕ್ ಹೌಲ್ ಮೂಲಕ ಸಂಪರ್ಕ ಸಾಧಿಸುತ್ತದೆ ಎನ್ನಬಹುದು. ಈಗ ನಮ್ಮ ಮೊಬೈಲ್ ಫೋನ್ ಹೊರಗಿರುವ ಬಿ ಟಿ ಎಸ್ ಜೊತೆ ಸಂಪರ್ಕ ಸಾಧಿಸುವುದಿಲ್ಲ(ಎಲ್ಲಿ ಫೆಮ್ಟೋಸೆಲ್ ಇರುತ್ತೋ ಅಲ್ಲಿಗೆ ಕನೆಕ್ಟ್ ಆಗಿಬಿಡುತ್ತದೆ., ಇಲ್ಲವಾದಲ್ಲಿ ಮಾಮೂಲಿ ಬಿ ಟಿ ಎಸ್ ಜೊತೆ ಮಾತಾಡುತ್ತದೆ). ಬಹಳಷ್ಟು ಡೆವಲಪ್ ಮೆಂಟ್ ಸಂಸ್ಥೆಗಳು ಈ ಫೆಮ್ಟೋ ಸೆಲ್ ನಲ್ಲಿ, ಬಿಟಿಎಸ್ ಸಂಪರ್ಕ ಸಾಧಿಸುವ ಆರ್ ಎನ್ ಸಿ (R N C – Radio Network Controller) ಕಾರ್ಯಗಳನ್ನೂ ಸೇರಿಸಿಬಿಡುತ್ತಾರೆ.
ಈ ಕೆಳಗಿನ ಚಿತ್ರ ನೋಡಿ. ಎರಡು ವಿಭಾಗಗಳಿವೆ. ಮೇಲಿನದು ಪುರಾತನ U M T S ನೆಟ್ ವರ್ಕ್. ಕೆಳಗಿನದು ಫೆಮ್ಟೋಸೆಲ್ ನೆಟ್ವರ್ಕ್.

ಇನ್ನು ಫೆಮ್ಟೋ ಸೆಲ್ ಗಳಲ್ಲೇ ’ಐ ಪಿ ಟಿ ವಿ ’ ಸೇವೆ, ಡಿ ಟಿ ಹೆ ಚ್ ಸೇವೆ, ಇತ್ಯಾದಿ ಸೇವೆಗಳನ್ನು ಒಟ್ಟುಗೂಡಿಸುವುದರಿಂದ ಅದರ ಮಾರುಕಟ್ಟೆ ಬೆಲೆ ಹೆಚ್ಚಾಗಬಹುದೆಂಬ ನಿರೀಕ್ಷೆ. ಈಗಾಗಲೇ ಮೊಬೈಲ್ ಫೋನ್ ಗಳಿಗೆ ದುಬಾರಿ ಬೆಲೆ, ಅದರ ಜೊತೆಗೆ ಗುಣಮಟ್ಟದ ನಿರೀಕ್ಷೆಯಲ್ಲಿ ಈ ಫೆಮ್ಟೋ ಸೆಲ್ ಗೆ ಕೂಡ ಬೆಲೆ ತೆತ್ತುತ್ತಾರೆಯೇ? ಈ ಉತ್ಪನ್ನ ವ್ಯಾವಹಾರಿಕವಾಗಿ ಗೆಲುವು ಕಾಣುತ್ತದೆಯೇ ಕಾದು ನೋಡಬೇಕು!




ಸರಳ ಹಾಗು ಅರ್ಥ ಪೂರ್ಣವಾಗಿ ವಿವರಿಸಿದ್ದೀರಿ. ತುಂಬ ಚನ್ನಾಗಿದೆ.
ಮಧುರ್ ಧನ್ಯವಾದಗಳು. ನಿಮ್ಮಂತಹ ಫೆಮ್ಟೋ ಸೆಲ್ ತಜ್ಞರಿಂದ ಇಂತಹ ಪ್ರೋತ್ಸಾಹದ ಮಾತುಗಳನ್ನು ಕೇಳಲು ಖುಷಿ