ರಸ್ತೆ, ವಾಹನಗಳ ರಣರಂಗವೇ? | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ರಸ್ತೆ, ವಾಹನಗಳ ರಣರಂಗವೇ?

ಜನ ಸಂಖ್ಯಾಸ್ಫೋಟದಿಂದ, ವಾಹನಾ ಸಂಖ್ಯಾಸ್ಪೋಟ ಉಂಟಾಗುವುದು ಸಹಜ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ, ವಾಹನದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಾಡುವುದು ಒಂದು ಸಾಹಸವೇ ಸರಿ. ನಾವು ಸ್ವತಃ ಚಾಲಕರಾಗಿದ್ದರೆ, ನಮ್ಮ ಗುರಿಯನ್ನು ತಲುಪಿದ ನಂತರ, ಈ ಸಾಹಸದ ಅನುಭವ ಹೆಚ್ಚಿನ ರೀತಿಯಲ್ಲಿ ವ್ಯಕ್ತವಾಗುವುದು. ವಾಹನ ಚಾಲನೆ ಒಂದು ಅಹ್ಲಾದಕರವಾದ ಅನುಭವವಾಗಿರಬೇಕು. ಪಯಣ ಸಾಹಸವಾದಲ್ಲಿ, ಈ ಅನುಭವ ಕುಂದಿ ಹೋಗುವುದು. ಇಂತಹ ಅಹಿತಕ್ಕೆ ರಸ್ತೆ ನಿಯಮ ಉಲ್ಲಂಘನೆ, ರಸ್ತೆ ದುರಸ್ತೆ, ಅಸಹನೆ, ಅವ್ಯವಸ್ತಿತ ವಾಹನ ಚಾಲನೆ, ಅಜ್ಞಾನ ಹೀಗೆ ಕಾರಣ ಹಲವು. ಈ ಅಂಕಣವನ್ನು ಓದಿದ ನಂತರ ನಿಮ್ಮ ಚಾಲನೆ, ಆಹ್ಲಾದಕರ ಹಾಗು ಅಪಾಯಕಾರಿಯಾಗದಿರುವಂತೆ ಪ್ರಯತ್ನಿಸುವೆ.

ನಾವು ನಿಯಮ ಉಲ್ಲಂಘನೆಯಲ್ಲಿ ನಿಸ್ಸೀಮರು. ನಿಯಮ ಉಲ್ಲಂಘನೆ ಅಪಘಾತಕ್ಕೆ ಬಲವಾದ ಕಾರಣ. ಯಾವುದೇ ಕಾರಣಕ್ಕೂ ನಿಯಮವನ್ನು ತಪ್ಪಿಸ ಕೂಡದು. ಕೆಲವೊಮ್ಮೆ ನಾವು ನಿಯಮ ಪಾಲಿಸಿದರೂ, ಇನ್ನಿತರರು ಪಾಲಿಸದಿದ್ದಾಗ ಕೂಡ, ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ಉದಾಹರಣೆಗೆ, ಬೇರೆಯವರು ಸನ್ನೆ ಕೊಡದೆ ವಾಹನದ ದಿಕ್ಕು ಬದಲಾವಣೆ ಮಾಡುವುದು. ಇಂತಹ ಸಂದರ್ಭದಲ್ಲಿ ನಮ್ಮ ವಾಹನದ ಗತಿ/ವೇಗಯನ್ನು ಕಡಿಮೆ ಮಾಡಿದಾಗ ಮಾತ್ರ ಅಪಾಯ ತಪ್ಪಿಸ ಬಹುದು. ನಾವು ವಾಹನ ಚಲಾಯಿಸುವಾಗ, ವಾಹನದ ವೇಗವನ್ನು ನಿಯಂತ್ರಿಸಿ ಹಾಗು ದಾರಿಯಲ್ಲಿ ಚಾಲನೆಯ ಸಮತೋಲನವನ್ನು ಕಂಡುಕೊಳ್ಳುವಂತೆ ನಡೆಸಬೇಕು. ವಾಹನಗಳು ನಿಗದಿತ ಸ್ಥಳದಲ್ಲಿ ಹಾಗು ಸಮಯದಲ್ಲಿ ನಿಲ್ಲಿಸಲು ಯೋಗ್ಯವಾಗಿರಬೇಕು. ರಸ್ತೆಯಲ್ಲಿ ಕಲ್ಪನಾ ಲೋಕಕ್ಕೆ ಜಾರುವುದು, ಕನಸು ಕಾಣುವುದು ಇಂತಹ ಮುಂತಾದ ಪ್ರಕ್ರಿಯೆಗಳಿಗೆ ಅವಕಾಶ ಕೊಡಕೂಡದು.ಹಾಗಾಗಿ ಸುತ್ತ ಮುತ್ತಲಿನ ವಾಹನಗಳ ಮೇಲೆ ಗಮನ ಇರಬೇಕು.

ಇನ್ನು ನಮ್ಮ ನಾಡಿನ ರಸ್ತೆಗಳು ಗುಂಡಿಗಳಿಂದ ತುಂಬಿರುತ್ತವೆ. ನಮ್ಮ ಪಾಡು ಗುಂಡಿಗಳನ್ನು, ಪಿಸ್ತೂಲಿನ ಗುಂಡುಗಳನ್ನು ತಪ್ಪಿಸುವಂತೆ, ವಾಹನವನ್ನು ರಸ್ತೆಯ ಮೂಲೆಮೂಲೆಯಲ್ಲಿ ಬಳುಕಿಸುತ್ತಾ ಮುಂದೆ ಸಾಗುವುದು ಒಂದು ಸಾಹಸವೇ ಸೈ. ಇನ್ನು ಕೆಸರು ತುಂಬಿದ ಗುಂಡಿಯಾದರೆ, ಪಾದಚಾರಿಗಳ ಮೇಲೆ ಕೆಸರು ಪ್ರೋಕ್ಷಿಸಿ, ಅವರಿಂದ ಶಾಪಗ್ರಸ್ತರಾಗಬೇಕು. ಮುಖ್ಯವಾಗಿ ಕೆಸರು ತುಂಬಿದ ಗುಂಡಿಯ ಆಳ ತಿಳಿಯದು. ದ್ವಿಚಕ್ರ ವಾಹನಗಳು ಕೆಸರು ತುಂಬಿದ ಸ್ಥಳಗಳಲ್ಲಿ ಹೋಗಲೇ ಕೂಡದು. ಕೆಸರು ತುಂಬಿದಲ್ಲಿ ವಾಹನವನ್ನು ಅತೀ ನಿಧಾನ ಹಾಗು ಹೆಚ್ಚು ಶಕ್ತಿಯೊಂದಿಗೆ [ಹೈ ಥ್ರಸ್ಟ್, ಲೊ ಪವರ್] ಚಲಾಯಿಸ ತಕ್ಕದ್ದು. ಇದರಿಂದ ವಾಹನ ಕೆಸರಿನಲ್ಲಿ ಸಿಲುಕುವುದನ್ನು ತಪ್ಪಿಸ ಬಹುದು.

ವಾಹನದ ಯೊಗ ಕ್ಷೇಮವನ್ನು ಆಗಾಗ ವಿಚಾರಿಸಿ, ಸದಾ ವಾಹನವನ್ನು ಸುಸ್ಥಿತಿಯಲ್ಲಿ ಕಾಪಾಡಬೇಕು. ಬ್ರೇಕ್ ಫೈಲ್ ಆಗುವುದು ವಾಹನದ ದುಸ್ಥಿತಿಯೇ ಕಾರಣ. ಹೆಚ್ಚಿನ ಚಾಲಕರಿಗೆ ರಸ್ತೆಯಲ್ಲಿ ವಾಹನ ಚಲಾಯಿಸುವುದು ಒಂದು ಸುಲಭ, ತುಚ್ಚ ಕೆಲಸವೆಂದು ತಿಳಿದಿರುತ್ತಾರೆ. ಇಂತಹ ಅನಾಸಕ್ತಿಯ ಭಾವನೆ, ವಾಹನದ ತಪ್ಪು ಚಲಾವಣೆಯಲ್ಲಿ ಕಾರಣವಾಗ ಬಹುದು. ಇಂತಹ ಸಂದರ್ಭದಲ್ಲಿ ನಾವು ನಮ್ಮನ್ನು ಮಾತ್ರ ಅಪಾಯ ಸಿಲುಕುವುದಲ್ಲದೆ, ಸುತ್ತ ಮುತ್ತಲಿನ ಜನರನ್ನು ಕೂಡ ಅಪಾಯಕ್ಕೆ ತಳ್ಳುತ್ತೇವೆ. ಇದಕ್ಕಿಂತ ಹೆಚ್ಚಿನದಾಗಿ ಜನರು ಅಸಹನೆಯನ್ನು ವ್ಯಕ್ತ ಪಡಿಸುತ್ತಾರೆ. ಅಸಹನೆ ಅಪಘಾತಕ್ಕೆ ಪರಮಾಪ್ತ. ಸಹನೆ ಕಳೆದುಕೊಂಡ ಚಾಲಕ, ಮದ್ಯಪಾನ ಮಾಡಿದ ಚಾಲಕನಿಗೆ ಸಮ.

ನಿನ್ನೆ ಮನೆಗೆ ಬರುವಾಗ ಎದುರು ಬದಿಯಿಂದ ವಾಹನವೊಂದು, ಹೈ ಬೀಂ ಬೆಳಕನ್ನು ಹಾಕಿಕೊಂಡು ಬರುತಿತ್ತು. ನನಗೆ ದಾರಿಗಾಣದು. ನಗರ ಪ್ರದೇಶದ ಒಳಗೆ ಹೈ ಬೀಂ ಉಪಯೋಗಿಸ ಕೂಡದು. ಇದು ಇತರರ ಚಾಲನೆಯಲ್ಲಿ ಅಡಚಣೆಯುಂಟು ಮಾಡುತ್ತದೆ. ಹೀಗೆ ಅಙ್ಞಾನವೂ ಅಪಘಾತಕ್ಕೆ ಕಾರಣವಾಗುವುದು.

ನಾವು ವಾಹನವನ್ನು ನಮ್ಮ ಪ್ರಯಾಣಕ್ಕೆ ಉಪಯೊಗಿಸ ಬೇಕು ಹೊರತು, ಸ್ಪರ್ಧೆಗಲ್ಲ. ನಾ ಮುಂದೆ, ಆತ ಹಿಂದೆ, ಎಂಬುದು ತಪ್ಪು. ನಮ್ಮ ಪ್ರಯಾಣಕ್ಕೆ ವೇಗ ಮುಖ್ಯ, ಆದರೆ ಅತಿಯಾದ, ಅಹಿತಕರ ವೇಗ ಕೂಡದು. ನಮ್ಮ ಪಯಣ ಸುಖಕರವಾಗಿರಲು ನಾವೇ ಜವಾಬ್ದಾರರು. ರಸ್ತೆ ರಣರಂಗವಾಗದೆ, ಅಹ್ಲಾದಕರ ಅನುಭವವನ್ನು ಒದಗಿಸುವ ತಾಣವಾಗಲಿ.

ನಿಮ್ಮ ಸಲಹೆಗಳೊಂದೆಗೆ ಪ್ರತಿಕ್ರಯಿಸಿ.

Tagged as:


1 ಪ್ರತಿಕ್ರಿಯೆ

  1. ಮಧುರ್,
    ಬಹಳ ಉಚಿತವಾದ ಲೇಖನ. ವಾಹನ ಚಲಾಯಿಸುವಾಗ ಸಹನೆ ಅತ್ಯಗತ್ಯ. ಚಾಲನೆಯ ವಿವಿಧ ಮಗ್ಗಲುಗಳ ಮೇಲೆ ಬೆಳಕು ಚೆಲ್ಲಿರುವುದು ಬಹಳ ಅಭಿನಂದನಾರ್ಹ.

ಪ್ರತಿಕ್ರಿಯಿಸಿ