ಐಷಾರಮ್ಯ, ಭೋಗಗಳನ್ನು ತ್ಯಜಿಸಿಬಿಡಬೇಕೆ? | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಐಷಾರಮ್ಯ, ಭೋಗಗಳನ್ನು ತ್ಯಜಿಸಿಬಿಡಬೇಕೆ?

ಐಷಾರಮ್ಯ, ಭೋಗಗಳನ್ನು ತ್ಯಜಿಸಿಬಿಡಬೇಕೆ?ಇದು ಬಹಳ ಹಿಂದಿನ ಕೂಗು. ಮನುಷ್ಯನ ಭೋಗಾಲಾಸೆಯಿಂದ ಕೆಡುಕೇ ಹೆಚ್ಚು ಎಂಬುದು ವಾದ. ಇತ್ತೀಚೆಗಂತೂ ಆರ್ಥಿಕ ಹಿಂಜರಿತದ ಉದಾಹರಣೆಯಿತ್ತು ಎಲ್ಲಾ ಮಾಹಿತಿ ತಂತ್ರಜ್ಞರನ್ನು ಹಳಿಯುವುದೇ. ಕೆಲಸ ಕಳೆದುಕೊಂಡವನನ್ನು, ಅದು ಅವನ ಭೋಗದ ಫಲ ಎಂದೇ ಹಂಗಿಸಿಬಿಡುತ್ತಾರೆ. ಐಷಾರಮ್ಯ ಜೀವನದಿಂದ ಹೊರಬಂದು ಉಳಿತಾಯದೆಡೆಗೆ ಹೋಗಿ ಎಂಬುದು ಎಲ್ಲರ ಬುದ್ಧಿವಾದ. ಯಾವನೇ ಒಬ್ಬನನ್ನು ಭೋಗಿ ಎಂದು ಕರೆದುಬಿಡುವುದು ಸರಿಯೇ? ಮತ್ತೊಬ್ಬನನ್ನು ಭೋಗಿ ಎನ್ನಲು ನಾವೇನು ವಿರಕ್ತರೇ? ಒಂದು ಚಿಂತನೆ.

ಒಂದು ಕಾಲದಲ್ಲಿ ಕಾಫಿ ಭೋಗದ ವಸ್ತುವಾಗಿತ್ತು. ಇಂದಿನ ಒತ್ತಡ ಜೀವನ ಶೈಲಿಯಲ್ಲಿ ಅದು ಅಗತ್ಯ ಪಾನೀಯ. ಹೀಗೆ ಒಬ್ಬನ ಅಗತ್ಯ ಬದಲಾದಂತೆ ಅವನ ಐಷಾರಮ್ಯಗಳೂ ಬದಲಾಗುತ್ತಾ ಹೋಗುತ್ತವೆ. ಆಸಕ್ತಿಗೆ ಮತ್ತು ಅಗತ್ಯಕ್ಕೆ ತಕ್ಕಂತೆ ನಮ್ಮ ಸ್ಥಿತಿಗೆ ಅನುಗುಣವಾಗಿ ಭೋಗವನ್ನು ಅನುಭವಿಸುವುದರಲ್ಲಿ ತಪ್ಪಿಲ್ಲ. ಅದಕ್ಕೆ ತಕ್ಕ ಶ್ರಮವನ್ನು ನಾವು ಪಟ್ಟಿದ್ದೇ ಆದರೆ! ಆದರೆ ಆ ಭೋಗ ಇಲ್ಲವಾದಾಗ, ಅಂತಹ ಭೋಗದ ವಸ್ತುಗಳಿಗೆ ವಿರಕ್ತನಾಗುವ ಕಲೆಯನ್ನೂ ಕರಗತಗೊಳಿಸಿಕೊಳ್ಳಬೇಕು.ಇಂದು ನಾವು ಚೆನ್ನಾಗಿ ದುಡಿಯುವಾಗ ಒಳ್ಳೆಯ ಚಲಚಿತ್ರದಲ್ಲಿ ಆಗಾಗ ಚಲಚಿತ್ರಗಳನ್ನು ನೋಡಬಹುದು, ಆಗಾಗ ಹೋಟೆಲ್ ಗಳಲ್ಲಿ ಊಟ ಮಾಡಬಹುದು, ಪಾನೀಯಗಳನ್ನು ಕುಡಿಯಬಹುದು. ಇವೆಲ್ಲಾ ಸಂತೋಷದ ಒಂದು ಅಂಗವಷ್ಟೇ. ಎಷ್ಟೋ ಜನಕ್ಕೆ ಆ ಸಂತೋಷ ತಾವೇ ಹಾಡಿಕೊಂಡಾಗ ಸಿಗಬಹುದು. ಅಥವಾ ಸಾವಿರಾರು ರೂಗಳನ್ನು ವ್ಯಯಿಸಿ ಮತ್ತೊಬ್ಬನು ಹಾಡುವುದನ್ನು ಕೇಳಿದಾಗ ಸಿಗಬಹುದು. ಎಲ್ಲವೂ ಕೊನೆಗೆ ಮನಸ್ಸಿನ ಸಂತೋಷಕ್ಕೆ ಬೇಕಾದ ಅಗತ್ಯವಾಗಿಬಿಡುತ್ತದೆ. ನಾವೊಮ್ಮೆ ಕೆಲಸ ಕಳೆದುಕೊಂಡು ನಮಗೆ ಹರಿಯುತ್ತಿದ್ದ ಹಣವು ನಿಂತು ಹೋದಾಗ, ಅದನ್ನೂ ಅಷ್ಟೇ ಸಂತೋಷದಿಂದ ಸ್ವೀಕರಿಸಬಹುದಲ್ಲವೇ! ಆ ಜೀವನ ಶೈಲಿಗೂ ಹೊಂದಿಕೊಳ್ಳಬಹುದಲ್ಲವೆ? ನಮ್ಮ ಐಷಾರಮ್ಯವನ್ನು ಕಡಿಮೆ ಮಾಡಿಕೊಳ್ಳಬಹುದಲ್ಲವೇ?

ಆದರೂ ಕೆಲವೊಂದು ಎಚ್ಚರಿಕೆಯ ಮಾತುಗಳನ್ನು ಕೇಳುವುದರಲ್ಲಿ ತಪ್ಪೇನಿಲ್ಲ. ನಮ್ಮ ಐಷಾರಮ್ಯ ಮತ್ತೊಬ್ಬರಿಗೆ ತೊಂದರೆಯಾಗಬಾರದಲ್ಲವೇ? ಕೆಲವೊಮ್ಮೆ ಕುಡಿಯುವುದು ಅಗತ್ಯ, ಮೋಜು, ಸಂತೋಷ. ಅಲ್ಲಿ ಎಚ್ಚರ ತಪ್ಪಿ, ಆರೋಗ್ಯ ಹಾಳುಗೆಡವಿಕೊಂಡು ಕುಟುಂಬ ಸದಸ್ಯರಿಗೆ ತೊಂದರೆಯಾದರೆ ಅದು ತಪ್ಪು. ಬೇರೆಯವರನ್ನು ನೋಯಿಸುವುದಷ್ಟೇ ಅಲ್ಲ. ನಮ್ಮ ಐಷಾರಮ್ಯ ಕೊನೆಗೆ ನಮ್ಮ ಮನಸ್ಸನ್ನೇ ಕೊನೆಗೆ ಹಿಂಸಿಸುವುದಾದರೆ ಅದರಿಂದಲೂ ದೂರ ಇರುವುದು ಒಳಿತಲ್ಲವೆ?

’ಡಿ ವಿ ಜಿ’ ಯವರು ’ಉಮರನ ಒಸಗೆ’ ಯಲ್ಲಿ ಉಮರನ ಉಪದೇಶದ ಬಗ್ಗೆ ಬರೆಯುವಾಗ ಹೀಗೆನ್ನುತ್ತಾರೆ,

“ಸುಖಪಡುವುದೆಂದರೆ ನಮ್ಮಲ್ಲಿ ಬಹುಜನಕ್ಕೆ ನಾಚಿಕೆ. ವೈರಾಗ್ಯವಲ್ಲವೇ ನಮ್ಮ ಪೂರ್ವಿಕರ ಪರಮಧ್ಯೇಯ? ನಮ್ಮಲ್ಲಿ ಬಯಕೆ ಹುಟ್ಟುವುದಿಲ್ಲವೆಂದಲ್ಲ; ಆದರೆ ಹುಟ್ಟಿದ ಬಯಕೆಯನ್ನು ಬಚ್ಚಿಡುವುದಕ್ಕೆ ಪ್ರಯತ್ನಿಸುತ್ತೇವೆ. ಅದು ನಡೆಯದಾಗ ನಮ್ಮ ಬಯಕೆಯ ಜವಾಬ್ದಾರಿಯನ್ನು ಹೊರಲು ಬೇರೊಬ್ಬರನ್ನು ಹುಡುಕುತ್ತೇವೆ.”

ಹೌದಲ್ಲವೆ? ಈ ರೀತಿ ಭೋಗವನ್ನು ತಡೆದುಕೊಳ್ಳುವುದರಿಂದ ಹೆಚ್ಚು ಪ್ರಯೋಜನವಿಲ್ಲ. ನಾನು ತಡೆದುಕೊಳ್ಳುವ ಸಂತೋಷವನ್ನು ಬೇರೆಯವರು ಪೂರೈಸಬೇಕೆಂಬ ನಿರೀಕ್ಷೆ ಇನ್ನೂ ಕೆಟ್ಟದಲ್ಲವೇ?

ಒಮರ್ ಖಯಾಮ್ ೧೦ ನೇ ಶತಮಾನದ ಪರ್ಷಿಯನ್ ಕವಿ ಹೀಗೆನ್ನುತ್ತಾನೆ

ಫಿಟ್ಸ್ ಗೆರಾಲ್ಡ್ ಇಂಗ್ಳಿಶ್ ಗೆ ಹೀಗೆ ಅನುವಾದಿಸಿದ್ದಾನೆ

A Moment’s Halt — a momentary taste
Of Being from the Well amid the Waste–
And Lo! the panthom Caravan has reach’d
The Nothing is set out from — Oh, make haste!

ಡಿ ವಿ ಜಿ ಯವರು ಇದನ್ನು ಹೀಗೆ ಕನ್ನಡಕ್ಕೆ ಭಾವಾನುವಾದಿಸಿದ್ದಾರೆ.

ಜೀವನದ ಸೊದೆಯ ಸವಿಯಲ್ಕಿರುವುದೀ ನಿಮಿಷ;
ಕರೆವುದಿನ್ನೊಂದು ನಿಮಿಷದಲಿ ಸುಡುಗಾಡು;
ರವಿ ಶಶಿಗಳೋಡುತಿಹರೆಲ್ಲ ಶೂನ್ಯೋದಯಕೆ;
ಸಾಗುತಿಹರಟಕ! ಬಾ, ಸೊದೆಯುಣುವ ಬೇಗ.

ಆದರೆ ತ್ಯಾಗ, ದಾನಗಳು ಬೇಡವೇ?

ಬೇಕು. ಎಷ್ಟೋ ಸನ್ನಿವೇಶಗಳಲ್ಲಿ ನಾವು ಮಾಡುವ ಸಣ್ಣ ಪುಟ್ಟ ದಾನಗಳು ನಮ್ಮ ಮನಸ್ಸಿಗೆ ಸಂತೋಷವನ್ನುಂಟು ಮಾಡುತ್ತವೆ. ಆದುದರಿಂದ ತ್ಯಾಗ ದಾನಗಳು, ಭೋಗಕ್ಕೆ ವಿರುದ್ಧವಲ್ಲ. ಎಲ್ಲವೂ ಮನಸ್ಸಿನ ಆನಂದಕ್ಕೆ ಇರುವುವೇ. ಮನ್ನಸಿಗೆ ನೋವನ್ನುಂಟು ಮಾಡುವ ತ್ಯಾಗ ದಾನಗಳಿಂದ ದೂರವಿರುವುದು ಒಳಿತಷ್ಟೆ.

ಅದೇ ಉಮರನ ಒಸಗೆಯಲ್ಲಿ ಡಿ ವಿ ಜಿ ಯವರು ಹೀಗೆನ್ನುತ್ತಾರೆ.

“ಭೋಗೋಚ್ಚೆ ಸ್ವಭಾವಸಿದ್ಧವಾಗಿ ಬಂದದ್ದು. ತ್ಯಾಗಬುದ್ಧಿ ಪ್ರಯತ್ನದಿಂದ ಸಂಪಾದಿಸಬೇಕಾದದ್ದು. ಸ್ವಾಭಾವಿಕವಾದ ಮನೋವೃತ್ತಿಯನ್ನು ಸ್ವಭಾವದ ದಮನದ ಕಡೆಗೆ ತಿರುಗಿಸುವುದು ಹೇಗೆ? ಇದು ಬಹು ಪುರಾತನ ಪ್ರಶ್ನೆ. ಪ್ರಿಯವಾದದ್ದಕ್ಕೂ ಶ್ರೇಯಸ್ಸಾದದ್ದಕ್ಕೂ ಇರುವ ವೈಷಮ್ಯವನ್ನು ಉಪನಿಷದಾಚಾರ್ಯರೇ ಕಂಡುಕೊಂಡಿದ್ದರು. ಆದರೆ ಅವೆರಡಕ್ಕೂ ನಡುವೆ ನಮಗೆ ಕಾಣುವ ಮಹಾಗರ್ತವನ್ನು ದಾಟಲು ಅವರೇನೂ ಅಂದು ರಾಜ ಸೇತುವೆಯನ್ನು ಕಟ್ಟಿರುವಂತಿಲ್ಲ. ಕೊಂಚ ಭೋಗಗಳನ್ನು ಭುಜಿಸಿ ಕೊಂಚ ಭೋಗಗಳನ್ನು ತ್ಯಜಿಸುವ, ಉಭಯ-ಮಿತಿಯ ನಯವನ್ನು, ದೀರ್ಘಕಾಲ ಸಂತತವಾಗಿ, ಸಾವಧಾನವಾಗಿ ಅಭ್ಯಾಸ ಮಾಡುವ ಉಪಾಯವೊಂದರಿಂದಲೇ ಆ ಗರ್ತತರಣ ಸಾಧ್ಯವಾದೀತೆಂದು ಅವರು ತಿಳಿದುಕೊಂಡಿದ್ದಂತೆ ಕಾಣುತ್ತದೆ. ಆತುರದಿಂದ ನಿಜವಾದ ವಿರಕ್ತಿ ಸಾಧ್ಯವಾಗದು. ಮಿಡಿಗಾಯಿಯನ್ನು ಹಿಸುಕಿ ಮಾಡಿದ ಹಣ್ಣಿನಲ್ಲಿ ತಾನಾಗಿ ಮಾಗಿದ ಹಣ್ಣಿನ ಸ್ವಾರಸ್ಯ ಬರಲಾರದು. ನಿರ್ಬಂಧದಿಂದ ಮಾಡಿದ ಇಂದ್ರಿಯೋಪವಾಸವು ಸ್ವತಃ ಉನ್ನತವಾದ ವೈರಾಗ್ಯದ ಸಮಾಧಾನ ತರಲಾರದು; ಅದು ಅದುಮಿಟ್ಟ ಸಿಡಿಮದ್ದೇ ಆದೀತು. ಮೊದಲು ಭೋಗೇಚ್ಚೆ ನೈಜವಾಗಿದ್ದಂತೆ ಆಮೇಲೆ ತ್ಯಾಗೇಚ್ಚೆ ನೈಜವಾದರೆ ಅದು ಹಿತ. ಅದು ಒಂದು ಮನಸ್ಸಾಂತ್ವನದ ಉಪಾಯದಿಂದ, – ಒಂದು ಸೂಕ್ಷ್ಮನಯದಿಂದ, – ಒಂದು ಆತ್ಮಶಿಕ್ಷಣ ಕೌಶಲದಿಂದ ಆಗತಕ್ಕದ್ದು. ಅದಕ್ಕೆ ಇದೇ ದಾರಿ ಎಂದು ನಿಷ್ಕರ್ಷೆಯಾಗಿ ರೇಖೆಯೆಳೆದು – ಮೈಸೂರಿನಿಂದ ಬೆಂಗಳೂರಿನ ರಸ್ತೆಯನ್ನು ನಕ್ಷೆಯಲ್ಲಿ ತೋರಿಸಿ ಕೊಡುವಂತೆ – ಗಜ ಅಡಿ ಅಂಗುಲ ಇಷ್ಟೆಂದು ವಿವರ ಸಹಿತವಾಗಿ ಹೇಳಿಕೊಡುವುದು ಯಾರಿಗೂ ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನೂ ತನ್ನ ಸ್ವಭಾವ ತನ್ನ ಸನ್ನಿವೇಶಗಳಿಗೆ ತಕ್ಕಂತೆ ತಮ್ಮ ಮುಕ್ತಿ ಪಥವನ್ನು ಕಂಡುಕೊಳ್ಳಬೇಕಾಗಿದೆ. ಎಷ್ಟೋ ಸಂದರ್ಭಗಳಲ್ಲಿ ಜೀವ ನೈರ್ಮಲ್ಯಕ್ಕೆ ವಿಷಯಾನುಭವವೇ ವೈರಾಗ್ಯಕ್ಕಿಂತ ಹೆಚ್ಚು ಸಹಾಯವಾದೀತು; “

ಎಷ್ಟು ಉಚಿತವಲ್ಲವೇ! ನಾವು ಇನ್ನು ಮುಂದೆ ಮತ್ತೊಬ್ಬನ ಜೀವನವನ್ನು ಅದು ಐಷಾರಮ್ಯ ಜೀವನ, ಅದು ಭೋಗ ಜೀವನ ಎನ್ನುವುದು ಬೇಡವಲ್ಲವೇ? ನಮ್ಮ ಭೋಗಾಲಾಸೆಗಳನ್ನು ತಣಿಸಿಕೊಳ್ಳೋಣಲ್ಲವೇ – ಒಂದು ಹಿಡಿತದಲ್ಲಿ!

Tagged as: , ,


ಪ್ರತಿಕ್ರಿಯಿಸಿ