ವಿಚಾರಧಾರೆ, ವ್ಯಕ್ತಿಪೂಜೆ ಮತ್ತು ಹೋಲಿಕೆ | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ವಿಚಾರಧಾರೆ, ವ್ಯಕ್ತಿಪೂಜೆ ಮತ್ತು ಹೋಲಿಕೆ

ಒಮ್ಮೆ ಕನ್ನಡದ ಒಂದು ಪ್ರಖ್ಯಾತ ಅಂತರ್ಜಾಲ ತಾಣದಲ್ಲಿ ಒಬ್ಬರು ಬರೆದಿದ್ದರು. ಆ ಬರವಣಿಗೆ ಈ ರೀತಿ ಇತ್ತು. ಅವರು ಆವರಣ ಓದಿದ್ದಾರೆ. ತಮ್ಮ ವಿಚಾರಧಾರೆಗೆ ಬಹಳ ಹೋಲಿಕೆಯಿದ್ದ ಕೃತಿಯನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಭೈರಪ್ಪನವರ ಇತರ ಕೃತಿಗಳನ್ನು ಬಹಳವಾಗಿ ಮೆಚ್ಚಿದ್ದಾರೆ. ಹೀಗೆ ಕುತೂಹಲದಿಂದ ಕನ್ನಡ ನಾಡಿನ ಇತರ ಸಾಹಿತಿಗಳ, ಆವರಣದ ಬಗೆಗಿನ ಅಭಿಪ್ರಾಯಗಳನ್ನು ತಿಳಿದಿಕೊಳ್ಳುವ ತವಕ. ಇವರಿಗೆ ಮೊದಲು ಪೂರ್ಣಚಂದ್ರ ತೇಜಸ್ವಿ ಕೂಡ ನೆಚ್ಚಿನ ಕೃತಿಕಾರರೆಂದು ಕರೆದುಕೊಳ್ಳುತ್ತಾರೆ. ಆದರೆ ತೇಜಸ್ವಿ ಆವರಣದ ಬಗ್ಗೆ ಕೊಟ್ಟ ಒಂದು ಹೇಳಿಕೆ “undigestible stuff” (ಜೀರ್ಣವಾಗದ ಸಂಗತಿಗಳು) ಇವರಿಗೆ ಇಷ್ಟವಾಗುವುದಿಲ್ಲ. ಇದು ಸಹಜ. ಆದರೆ ಇವರು ಒಂದು ಹೆಜ್ಜೆ ಮುಂದೆ ಹೋಗಿ, ಭೈರಪ್ಪ ಮತ್ತು ತೇಜಸ್ವಿಯವರ ಕೃತಿಗಳ ಸಮಗ್ರ ಅವಲೋಕನ ಮಾಡಿ ಭೈರಪ್ಪನವರೇ ಉತ್ತಮ ಎಂಬ ತೀರ್ಪು ಕೊಟ್ಟುಬಿಡುತ್ತಾರೆ. ಇದಕ್ಕೆ ಇವರು ಹೇಳುವುದು ಹೀಗೆ.. ತೇಜಸ್ವಿ ಬರೆದಿದ್ದೇನು? ಕೆಲವು ಅನುವಾದ, ಇನ್ನು ಕೆಲವು ಪಕ್ಷಿ ಪುಕ್ಕದ ಕಥೆ, ಒಂದು ಪ್ರವಾಸ ಕಥನ ಅಷ್ಟೆ. ಆದರೆ ಭೈರಪ್ಪನವರು ಇತಿಹಾಸಕಾರ, ತತ್ವಜ್ಞಾನಿ. ಬಹಳ ಸಂಶೋಧನೆ ಮಾಡಿ ಬರೆಯುತ್ತಾರೆ. ಅದಕ್ಕೆ ಭೈರಪ್ಪ ತೇಜಸ್ವಿಗಿಂತ ಉತ್ತಮ ಎನ್ನುತ್ತಾರೆ. ಎಷ್ಟು ಎಳಸು ವಾದ ಅನ್ನಿಸುವುದಿಲ್ಲವೇ? ಭೈರಪ್ಪ ಮತ್ತು ತೇಜಸ್ವಿ ಇಬ್ಬರ ಕ್ಷೇತ್ರ ಸಂಪೂರ್ಣ ಬೇರೆ ಬೇರೆ. ತಮ್ಮ ಕ್ಷೇತ್ರಗಳಲ್ಲಿ ಇಬ್ಬರೂ ಅಭೂತಪೂರ್ವ ಕೃತಿಗಳನ್ನು ಬರೆದಿದ್ದಾರೆ. ಭೈರಪ್ಪ ಕೆಲವು ಕೃತಿಗಳನ್ನು ಬರೆಯಬೇಕಾದರೆ ಎಷ್ಟೋ ವರ್ಷಗಳ ಕಾಲ ಹಿಮಾಲಯದಲ್ಲಿದ್ದು ಸಂಶೋಧನೆ ಮಾಡಿ ಬರೆದಿದ್ದಾರೆ. ತೇಜಸ್ವಿ ಪಕ್ಷಿಗಳ ಬಗ್ಗೆ ಬರೆಯಬೇಕಾದರೆ ಕಾಡು ಮೇಡುಗಳನ್ನು ಸುತ್ತಿ, ಪಕ್ಷಿಗಳನ್ನು ಬಹಳ ಹತ್ತಿರದಿಂದ ಅಧ್ಯಯನ ಮಾಡಿ ಬರೆಯುತ್ತಾರೆ. ಯಾವುದೋ ಹಳ್ಳಿಯಲ್ಲಿ ಮನೆ ಕಟ್ಟಿಕೊಂಡು ಸುತ್ತ ಕಾಡು ಬೆಳಸಿ, ಕೆರೆ ಕಟ್ಟಿ ಪಕ್ಷಿಗಳನ್ನು ಆಕರ್ಷಿಸಿ ಅವುಗಳ ಅಧ್ಯಯನಕ್ಕೆ ಬಹಳ ಶ್ರಮ ಪಡುತ್ತಾರೆ. ಹೀಗೆ ಇಬ್ಬರದೂ ಶ್ರಮದ ಹಾದಿಯೇ. ನನಗೆ ಒಬ್ಬರು ವಿಭೂತಿಪುರುಷರಾದರು ಎಂಬ ಮಾತ್ರಕ್ಕೆ ಇಬ್ಬರನ್ನೂ ಒಂದು ವಾಕ್ಯದಲ್ಲಿ ವಿಮರ್ಶೆ ಮಾಡಿ ತೀರ್ಪು ಕೊಡುವುದು ಎಷ್ಟು ತಪ್ಪಲ್ಲವೇ? ಆಷ್ಟಕ್ಕೂ ಆ ಬರಹಗಾರರು ಬರೆಯಬೇಕಾಗಿದ್ದುದು ತೇಜಸ್ವಿ ಆವರಣದ ಬಗ್ಗೆ ಕೊಟ್ಟ ಹೇಳಿಕೆ ತಪ್ಪು ಎಂದು. ಅದರ ಬಗ್ಗೆ ವಸ್ತುನಿಷ್ಠವಾಗಿ ವಿಮರ್ಶಿಸಿದ್ದರೆ ಎಲ್ಲರೂ ಒಪ್ಪಿಕೊಳ್ಳಬಹುದಿತ್ತು!

ಮೊನ್ನೆ ಗೆಳೆಯ ಕಳುಹಿಸಿದ್ದ ಮತ್ತೊಂದು ಬ್ಳಾಗ್ ಅಂಕಣ ಓದುತ್ತಿದ್ದೆ. ಅವರು ’ಬ್ಯಾಂಗಳೋರ್’ ಅನ್ನು ಬೆಂಗಳೂರು ಅಂತ ಹೆಸರು ಬದಲಿಸುವುದರಲ್ಲಿ ಯಾವುದೇ ಉಪಯೋಗವಿಲ್ಲ ಎಂಬ ವಿಷಯದ ಬಗ್ಗೆ ಚರ್ಚೆ ಪ್ರಾರಂಭಿಸುತ್ತಾರೆ.ಆದರೆ ಅದಕ್ಕೆ ಪೂರಕವಾದ ಯಾವುದೇ ವಾದವಿಲ್ಲ. ಅವರು ಬೇಡ ಎಂದು ಹೇಳುವುದು ಏಕೆಂದರೆ ಈ ಹೆಸರು ಬದಲಾವಣೆಗೆ ಸೂಚಿಸಿದ್ದು ಅನಂತಮೂರ್ತಿಯವರಂತೆ. ಆ ಬ್ಲಾಗಿಗರಿಗೆ ಅನಂತಮೂರ್ತಿ ವಿಚಾರಧಾರೆ ಇಷ್ಟವಾಗುವುದಿಲ್ಲ. ಒಪ್ಪಿಕೊಳ್ಳೋಣ. ಆದರೆ ಅವರು ಸೂಚಿಸಿದರು ಎಂಬ ಮಾತ್ರಕ್ಕೆ ಹೆಸರು ಬದಲಾವಣೆ ಸರಿಯಿಲ್ಲ ಎಂಬ ವಾದ ಒಪ್ಪತಕ್ಕದ್ದೇ? ಅಥವಾ ಎರಡೂ ಸಂಬಧವುಳ್ಳದ್ದೇ? ಹೀಗೆ ಆ ಅಂಕಣವನ್ನು ಅನಂತಮೂರ್ತಿಯವರ ಚಾರಿತ್ರ್ಯವಧೆಗೆ ಬಳಸಿಕೊಳ್ಳುವುದು ಸರಿಯೆ? ಹೀಗೆ ಇದೇ ಬ್ಳಾಗಿಗರು ಮತ್ತೊಂದು ಅಂಕಣದಲ್ಲಿ ಆವರಣ ಕೃತಿಯ ಬಗ್ಗೆ ಬರೆಯುತ್ತಾ, ಅನಂತ ಮೂರ್ತಿಯವರು ಆವರಣದ ಬಗ್ಗೆ ಕೊಟ್ಟ ಹೇಳಿಕೆಯ (ಭೈರಪ್ಪ ಸಾಹಿತಿಯೇ ಅಲ್ಲ.. ಅವರೊಬ್ಬ ಚರ್ಚಾಪಟು.. ಇತ್ಯಾದಿ) ಬಗ್ಗೆ ಆಕ್ಷೇಪ ವ್ಯಕ್ತ ಪಡಿಸುತ್ತಾರೆ. ಇಲ್ಲಿಯವರೆಗೂ ಸರಿ. ಆದರೆ ಅವರು ಆ ಹೇಳಿಕೆ ಸರಿ ಅಲ್ಲವೋ ಅನ್ನುವ ತುಲನೆಗೆ ಹೋಗದೆ, ಭೈರಪ್ಪ ಮತ್ತು ಅನಂತಮೂರ್ತಿಯವರ ಕೃತಿಗಳ ಹೋಲಿಕೆಗೆ ಇಳಿದುಬಿಡುತ್ತಾರೆ. ಅನಂತಮೂರ್ತಿ ಬರೆದಿರುವುದು ಸೊನ್ನೆ ಎಂಬ ತೀರ್ಪು ಕೊಟ್ಟಾಗ ಅನಂತಮೂರ್ತಿಯವರ ಭೈರಪ್ಪನವರ ಬಗ್ಗೆ ಕೊಟ್ಟ ಹೇಳಿಕೆಗೂ, ತಾವು ಅನಂತಮೂರ್ತಿಯವರ ಬಗ್ಗೆ ಕೊಡುತ್ತಿರುವ ಹೇಳಿಕೆಗೂ ಅಂತಹ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ ಎಂಬುದು ಇವರಿಗೆ ತಿಳಿದು ಬರುವುದಿಲ್ಲ.ಹೀಗೆ ಅವರು ಮುಂದೆ ಬರೆಯುತ್ತಾ ಅನಂತಮೂರ್ತಿಯವರ ಮತ್ತು ಸಂಗಡಿಗರ ನವ್ಯ ಸಾಹಿತ್ಯ, ನಮ್ಮ ಹಿಂದಿನ ಸಾಹಿತಿಗಳಾದ ಡಿವಿಜಿ, ಮಾಸ್ತಿ, ಬೇಂದ್ರೆ ಯವರ ಸಾಹಿತ್ಯವನ್ನು (ಸನಾತನ ಧರ್ಮದ ಒಳ್ಳೆಯ ವಿಷಯಗಳನ್ನು ತಿಳಿಸಿದ ಸಾಹಿತ್ಯ) ಬೇರು ಮಟ್ಟದಿಂದ ಕಿತ್ತು ಹಾಕಿತು ಎಂದಿದ್ದಾರೆ. ಇದು ಅಕ್ಷರಷಃ ತಪ್ಪು. ಮೇಲಿನ ಮೂರೂ ಸಾಹಿತಿಗಳ ಸಾಹಿತ್ಯ ಎಲ್ಲಾ ಕಾಲಘಟ್ಟಗಳಲ್ಲೂ ಪ್ರಸ್ತುತವಿತ್ತು. ಈಗಲೂ ಪ್ರಸ್ತುತವಿದೆ. ಓದುಗರು ಬುದ್ಧಿವಂತರು, ಅವರಿಗೆ ಬೇಕಾದುದ್ದನ್ನು ಆಯ್ಕೆ ಮಾಡಿ ಓದುವ ಬೌದ್ಧಿಕ ಜಾಣತನ ಇನ್ನೂ ಇದೆ.

ಇನ್ನೊಂದು ಪ್ರಸಂಗ ಬಹಳ ಜನಜನಿತ. ಹುಬ್ಬಳ್ಳಿಯಲ್ಲಿ ಆವರಣ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಒಬ್ಬ ಖ್ಯಾತ ಪತ್ರಕರ್ತ ಆ ವೇದಿಕೆಯನ್ನು ಅಂನತಮೂರ್ತಿಯವರನ್ನು ಅನುಚಿತವಾಗಿ ಹಳಿಯಲು ಬಳಸಿಕೊಂಡಿದ್ದು. ಅಂದು ಭೈರಪ್ಪನವರಿಗೂ ಮುಜುಗರವಾಗದೆ ಇರಲಾರದು.ಈ ವ್ಯಕ್ತಿ ಪೂಜೆ ವಿಚಾರಧಾರೆಗಳ ಅತಿರೇಕ ಎಷ್ಟು ಕೆಟ್ಟದ್ದು ಎಂದರೆ, ಯಾವ ವೇದಿಕೆಯಲ್ಲಿ ಯಾವ ಮಾತುಗಳನ್ನಾಡಬಹುದು ಎಂಬ ಪರಿಜ್ಞಾನವೇ ಇಲ್ಲವಾಗಿಬಿಡುತ್ತದೆ.ಸೂರ್ಯನಿಗೆ ಉಗಿದರೆ ಅದು ನಮ್ಮ ಮಖಕ್ಕೇ ಬೇಳುವುದು ಎಂಬಿತ್ಯಾದಿಯಾಗಿ ಬೇಡವಾದದ್ದೆಲ್ಲಾ ಬಡಬಡಾಯಿಸಿ ಆ ಸಾಹಿತ್ಯಿಕ ವಾತಾವರಣಕ್ಕೆ ಕಳಂಕ ತಂದ ಆ ಪತ್ರಕರ್ತ, ಆ ತನ್ನ ವರ್ತನೆಯನ್ನು ಸಮರ್ಥಿಸಿಕೊಳ್ಳಲು ಅಡ್ಡಡ್ಡ ಉದ್ದುದ್ದ ಬರೆದದ್ದು ದಂತಕಥೆ.

ಒಮ್ಮೆ ಹಿಂದೂ ಪತ್ರಿಕೆಯಲ್ಲಿ ಮಂಕುತಿಮ್ಮನ ಕಗ್ಗಕ್ಕೆ ಜ್ಞಾನಪೀಠ ಪ್ರಶಸ್ತಿ ಬರಲಿಲ್ಲವೆಂಬ ಸುದ್ದಿ ಪ್ರಕಟವಾದಾಗ, ಡಿ ವಿ ಜಿ ಯವರು ಈ ರೀತಿ ಎರಡು ವಿಭಿನ್ನ ಕೃತಿಗಳನ್ನು ಹೋಲಿಕೆ ಮಾಡಿ ಪ್ರಶಸ್ತಿ ಕೊಡುವುದೇ ತಪ್ಪು ಎಂದು ಪ್ರತಿಪಾದಿಸುತ್ತಾರೆ. ಇದ್ದುದರಲ್ಲಿ ಆರೋಗ್ಯಕರ ಹೋಲಿಕೆಯನ್ನೇ ಬೇಡ ಎನ್ನುವ ದಾರ್ಶನಿಕರಿರುವಾಗ, ನಾವು ಮೇಲೆ ಕಂಡಂತೆ ಅನಾರೋಗ್ಯಕರ ಹೋಲಿಕೆಗಳಂತೂ ಬೇಡವೇ ಬೇಡ ಅಲ್ಲವೆ?



ಪ್ರತಿಕ್ರಿಯಿಸಿ