ನಾವು ಪೋಷಕರು.. | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ನಾವು ಪೋಷಕರು..

ತಂದೆ ತಾಯಿ ಮಕ್ಕಳನ್ನು ಕಷ್ಟ ಪಟ್ಟು, ಹೆತ್ತು-ಹೊತ್ತು, ಬೆಳೆಸಿ, ಓದಿಸಿ ಮುಂದೆ ತರುತ್ತಾರೆ, ಆದರೆ ಮಕ್ಕಳು ಅದೇ ಪ್ರೀತಿಯನ್ನು ತಂದೆ ತಾಯಿಗಳಿಗೆ ಧಾರೆಯೆರೆಯುವುದಿಲ್ಲ, ಮಕ್ಕಳು ತಂದೆ ತಾಯಿಗಳಿಂದ ದೂರವಾಗಿಬಿಡುತ್ತಾರೆ ಎಂಬ ಕೂಗು-ಕೊರಗು ಹಿಂದಿನಿಂದ ಇದೆ.ಇದಕ್ಕೆ ಬಹಳಷ್ಟು ಸಮಯದಲ್ಲಿ ಪ್ರೀತಿ, ತತ್ವ ಮತ್ತು ತರ್ಕಗಳ ಆಧಾರವಿರದೆ ಸಿನಿಕ ಭಾವುಕತೆಯ ಮೇಲೆ ಕೇಳಿ ಬರುವಂತಹ ದೂರು. ಇಂತಹ ಒಂದು ಸೂಕ್ಷ್ಮ ವಿಷಯವನ್ನು ಇಂದು ವಸ್ತುನಿಷ್ಠವಾಗಿ ವಿಶ್ಲೇಷಿಸೋಣ.

ಮೊದಲನೆಯದಾಗಿ ನಾವು ನಮ್ಮ ಮಗುವನ್ನು ಹೆತ್ತು ಹೊತ್ತು ಬೆಳೆಸುವುದರಲ್ಲಿ (ಯಾವುದೇ ಮಗುವನ್ನು ಬೆಳೆಸುವುದರಲ್ಲಿ) ಕಷ್ಟ ಎಂಬುದು ಅತಿಶಯದ, ಸತ್ಯಕ್ಕೆ ದೂರವಾದ ಮಾತು. ನಮಗೆ ಒಂದು ಮಗು ಬೇಕೆನ್ನಿಸಿದರೆ ನಮಗೆ ಮಗುವಿನ ಅವಶ್ಯಕತೆಯಿರುತ್ತದೆ. ಇನ್ನು ಮಕ್ಕಳ ಆಟ ಪಾಠ, ಅವುಗಳ ಮುಗ್ಧತೆ ನಮ್ಮ ಕಷ್ಟ ದುಖ: ಗಳನ್ನು ಮರೆಸುತ್ತವೆ. ಸಾಮಾನ್ಯವಾಗಿ ಯಾವ ಮಗುವೂ ತಾನು ೧೦-೧೨ ವರ್ಷ ದಾಟುವವರೆಗೆ ಮುಗ್ಧತೆಯನ್ನು ಕಳೆದುಕೊಳ್ಳುವುದಿಲ್ಲ. ಹಾಗೆ ಪ್ರೀತಿ ತೋರಿ ಬೆಳೆಸುವುದು ಪಾಲಕರ ಕರ್ತವ್ಯ. ಕರ್ತವ್ಯ ಎನ್ನುವುದಕ್ಕಿಂತ ಅದು ಪಾಲಕರಿಗೆ ಸಂತಸ ತರುವ ಕಾಯಕವಾಗಬೇಕು. ಈ ವಯಸ್ಸಿನಲ್ಲಿ ಮಕ್ಕಳು ತಮ್ಮ ಪಾಲಕರಿಗೆ ಕೊಡುವ ಸಂತೋಷವನ್ನು ನೆನಪಿನಲ್ಲಿಟ್ಟರೆ ಜೀವನ ಪರ್ಯಂತ ಆ ಸಂತೋಷವನ್ನು ಮೆಲುಕಿ ಹಾಕಿ ಕಾಲ ಕಳೆಯುವಷ್ಟಿರುತ್ತದೆ. ನಮ್ಮಲ್ಲಿ ಇನ್ನೊಂದು ತಪ್ಪು ಕಲ್ಪನೆಯಿದೆ. ಮಕ್ಕಳನ್ನು ಸಂತೋಷವಾಗಿ ಬೆಳೆಸುವುದಕ್ಕೆ ಅಪಾರ ದುಡ್ಡಿರಬೇಕೆಂಬುದು! ಇದು ಅಕ್ಷರಷ: ತಪ್ಪು. ಮಕ್ಕಳಿಗೆ ಬೇಕಾಗಿರುವು ನಿಮ್ಮ ಸನಿಹ, ಪ್ರೀತಿ. ಮುದ್ದೆ ಮಾಡುವ ಕೋಲಿನಿಂದಲೇ ನೀವು ಅವನಿಗೆ ಕ್ರಿಕೆಟ್ ಆಟ ಆಡಿಸಿ ಸಂತಸಪಡಿಸಬಹುದು.ಹೌದು ನಮ್ಮ ಶಕ್ತಿಗಾನುಸಾರವಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ವಲ್ಪ ಹಣ ವ್ಯಯಿಸಬೇಕಾಗುತ್ತದೆ. ಆದುದರಿಂತ ಅಷ್ಟು ಹಣವನ್ನು ಸಂಪಾದಿಸಿ, ನಾವು ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ ಮೇಲೆ ನಾವು ಮಗುವನ್ನು ಹೊಂದುವ ಯೋಚನೆ ಮಾಡುವುದು ಒಳಿತು. ಒಂದು ಸುಖ ಬೇಕಾದರೆ ಹಿನ್ನಲೆಯಲ್ಲಿ ಸ್ವಲ್ಪ ಕಷ್ಟ ಪಡಬೇಕಾದೀತು. ಆದರೆ ಆ ಕಷ್ಟಕ್ಕೆ ಮಕ್ಕಳನ್ನು ದೂರುವುದು ಸರಿಯಲ್ಲ.ನಮ್ಮ ಶಕ್ತಿಗನುಗುಣವಾಗಿ ಕಡಿಮೆ ಮಕ್ಕಳನ್ನು ಹೊಂದುವುದು ಮತ್ತೊಂದು ನೆನಪಿನಲ್ಲಿಡಬೇಕಾದ ಅಂಶ. ಮಕ್ಕಳೊಂದಿಗೆ ನಾವೂ ಮಕ್ಕಳಾಟವಾಡಬಹುದಾದ ಸವಿ ಸಮಯ ಇದು.

ಇನ್ನು ಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳಾಗಿ ಕೆಲವು ವಿಚಾರಧಾರೆಗಳು ಹುಟ್ಟಿಕೊಳ್ಳುವ, ಬದಲಾಗುವ ಸಾಧ್ಯತೆ ಹೆಚ್ಚು. ಎಷ್ಟೋ ವಿಚಾರಗಳಲ್ಲಿ ಮಕ್ಕಳ ಯೋಚನೆ ನಮ್ಮ ಯೋಚನೆಗಳಿಗೆ ವ್ಯತಿರಿಕ್ತವಾಗುವ ಸಾಧ್ಯತೆಯಿರುತ್ತದೆ. ನಮ್ಮ ಮಕ್ಕಳು ನಮ್ಮ ಮುಂದಿನ ಪೀಳೆಗೆಯವರು ಎಂಬ ಸತ್ಯವನ್ನು ನಾವು ಅರಿತು ಮತ್ತು ಈ ಪೀಳೆಗೆಯ ಅಂತರವನ್ನು ನಾವು ಮರೆಯದೆ ನಮ್ಮ ವಿಚಾರಧಾರೆಗಳನ್ನು ನಮ್ಮ ಮಕ್ಕಳ ಮೇಲೆ ಹೇರುವುದನ್ನು ನಿಲ್ಲಿಸಬೇಕಾದ ಸಮಯ ಇದು. ಸುಮ್ಮನೆ ತರ್ಕರಹಿತವಾಗಿ ಅದು ಮಾಡು, ಇದು ಮಾಡಬೇಡ ಎಂದು ಹೇಳಲು ಪ್ರಾರಂಭಿಸಿದರೆ ಅವರು ನಮ್ಮನ್ನು ವಿರೋಧಿಸಲು ಪ್ರಾರಂಭಿಸುತ್ತಾರೆ.ಈ ಅವಧಿಯಲ್ಲಿ ಮಕ್ಕಳಿಗೆ ಪೋಷಕರು ಗೆಳೆಯರಾಗಿರಬೇಕು. ನಮಗೇ ತಿಳಿಯದಿರುವ ಎಷ್ಟೋ ವಿಷಯಗಳನ್ನು ಮಕ್ಕಳಿಂದ ತಿಳಿದುಕೊಳ್ಳಲು ಸದಾವಕಾಶ. ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಕೂತು ಚರ್ಚಿಸಬೇಕೇ ಹೊರತು ನಮ್ಮ ನಿಲುವುಗಳನ್ನು ಹೇರುವ ಹಾಗಿಲ್ಲ. ಇದು ಮಕ್ಕಳು ಹಿರಿಯ ಪ್ರಾಥಮಿಕ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕಲಿಯುವ ಸಮಯ. ಈ ಸಮಯದಲ್ಲಿ ಮಕ್ಕಳಿಗೆ ಅಪಾರವಾಗಿ ಓದುವ ಹವ್ಯಾಸವನ್ನು ಬೆಳೆಸಲು ನಾವು ಶ್ರಮಿಸಬೇಕು. ನಾವು ಹೆಚ್ಚು ಓದಿ ಮಕ್ಕಳ ಸಮಕ್ಕೆ ತಿಳಿದುಕೊಳ್ಳಬೇಕು. ಈ ಸಮಯದಲ್ಲೂ ಮಕ್ಕಳಿಗೆ ಯಾವುದೇ ಒತ್ತಡವನ್ನು ಹೇರದೆ ಅವರ ಏಳಿಗೆಯನ್ನು ನೋಡಿ ಆನಂದಿಸುವ ಸಮಯ. ಅವರ ಕಷ್ಟಗಳನ್ನು ಅರಿತು ಅವರಿಗೆ ಸಹಾಯ ಹಸ್ತವನ್ನು ಚಾಚುವ ಸಮಯ.

ಇನ್ನು ಹೆಚ್ಚು ಪೋಷಕರು ಎಡವುವುದೇ ಮಕ್ಕಳು ಪದವಿ ಪೂರ್ವ ಶಿಕ್ಷಣ ಮುಗಿಸಿ, ವೃತ್ತಿ ಶಿಕ್ಷಣಕ್ಕೆ ಸೇರುವ ಸಮಯದಲ್ಲಿ. ಮಕ್ಕಳ ಆಸಕ್ತಿಯನ್ನರಿತು ಅವರಿಗೆ ಇಷ್ಟವಾಗುವ ವಿಷಯದಲ್ಲಿ ಪದವಿಯನ್ನು ಗಳಿಸಲು ಸಹಾಯ ಮಾಡಬೇಕು. ಮಗ ಈ ಹುದ್ದೆಯನ್ನು ಹಿಡಿದರೆ ಹೆಚ್ಚು ಸಂಪಾದನೆ ಮಾಡಿ ನಮ್ಮನ್ನು ಸುಖವಾಗಿ ಸಾಕುತ್ತಾನೆ ಎಂಬ ವ್ಯಾಮೋಹ ಬಿಡಬೇಕು. ಇಲ್ಲಿಗಾಗಲೇ ಮಕ್ಕಳು ಸ್ವಂತ ವಿಚಾರ ಮಾಡುವ ಶಕ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಈ ಹಂತದಲ್ಲಿ ವೃತ್ತಿ ಶಿಕ್ಷಣಕ್ಕೆ ಅಪಾರ ಖರ್ಚನ್ನು ವ್ಯಯಿಸುವ ಸಂದರ್ಭವೊಡ್ಡಬಹುದು. ನಮ್ಮಲ್ಲಿ ಆ ಅಪಾರ ಹಣವಿದ್ದರೆ ಒಳ್ಳೆಯದು, ಇಲ್ಲವೆಂದರೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್ ಗಳು ಕೊಡುವ ಸಾಲವನ್ನು ಉಪಯೊಗಿಸಿಕೊಳ್ಳುವ ಸಲಹೆ ಕೊಡಬೇಕು. ಅವರಿಗೆ ಅವರ ಜೀವನದ ಜವಾಬ್ದಾರಿಯನ್ನು ವಹಿಸಲು ಇದು ಸೂಕ್ತ ಸಮಯ. ನಮ್ಮಲ್ಲಿ ಸ್ವಲ್ಪ ದುಡ್ಡಿದ್ದರೆ ಅದನ್ನು ನಮ್ಮ ಸ್ವಂತ ಆಸಕ್ತಿಗಳಿಗಾಗಿ ಬಳಸಬೇಕಾದ ಸಮಯ ಇದು.ಇನ್ನೂ ಹೆಚ್ಚಿನ ಮಹತ್ವ ಕೊಡಬೇಕಾದ ಅಂಶ ನಮ್ಮ ಆರೋಗ್ಯ. ಈ ಸಮಯದಲ್ಲಿ (ಹಿಂದಿನ ಸಮಯದಲ್ಲೂ) ನಮ್ಮ ಆರೋಗ್ಯವನ್ನು ಹತೋಟಿಯಲ್ಲಿಡಬೇಕು. ಬೇಕಾದರೆ ಆರೋಗ್ಯ ವಿಮೆಯೊಂದನ್ನು ಕೊಳ್ಳಬೇಕು. ಮಕ್ಕಳಿಗಾಗಿ ದುಡಿದು ಆಸ್ತಿ ಪಾಸ್ತಿಗಳನ್ನು ಮಾಡಬೇಕೆಂಬ ತಪ್ಪನ್ನು ತಿದ್ದಿಕೊಳ್ಳಬೇಕು. ಮಕ್ಕಳಿಗಾಗಿ ಬಹಳ ಕಷ್ಟ ಪಟ್ಟೆ, ನನ್ನ ಆರೋಗ್ಯ ಹಾಳಾಯಿತು ಎಂಬ ಮಾತುಗಳು ಬರದೆ ಇದ್ದರೆ ಚಂದ. ಕೆಲವೊಮ್ಮೆ ಎಷ್ಟೇ ಎಚ್ಚರದಲ್ಲಿದ್ದರೂ ಆರೋಗ್ಯ ಹದಗೆಡುವ ಸಂದರ್ಭ ಒದಗಿ ಬರಬಹುದು. ಆಗ ಮಕ್ಕಳ ಸಹಾಯ ಪಡೆಯುವುದರಲ್ಲಿ ತಪ್ಪಿಲ್ಲ. ಆದರೆ ನಮ್ಮ ನಿರ್ಲಕ್ಷೆಯಿಂದ ಮಕ್ಕಳಿಗೆ ಹೊರೆಯಾಗಿ ಕೊನೆಗೆ ಮಕ್ಕಳನ್ನು ದೂರುವುದು ಸರಿಯಲ್ಲ.ಈ ಸಮಯದಲ್ಲಿ ಮಕ್ಕಳು ಮಾನಸಿಕವಾಗಿ ಉನ್ನತಿ ಪಡೆಯುವುದನ್ನು ಗಮನಿಸಿ ಆನಂದಿಸಬೇಕು. ಇನ್ನು ಮಕ್ಕಳ ಮದುವೆ, ಕೆಲಸ ಮುಂತಾದ ವಿಚಾರಗಳಲ್ಲಿ ಅವರ ನಿರ್ಧಾರಗಳನ್ನು ಗೌರವಿಸುವುದು ಒಳಿತು. ಕೆಲವು ಸಲಹೆ ಸೂಚನೆಗಳನ್ನು ಕೊಡಬಹುದು, ಆದರೆ ಇಲ್ಲಿ ವಿರೋಧಿಸಿದರೆ ಜೀವನ ಕೆಟ್ಟೀತು! ಮಕ್ಕಳು ಜೀವನವನ್ನು ರೂಪಿಸಿಕೊಳ್ಳುವ ಸಮಯ ಇದು. ಮಕ್ಕಳು ನಮ್ಮಿಂದ ದೂರವಾಗಬಹುದಾದ ಸನ್ನಿವೇಶ ಒದಗಿ ಬರಬಹುದು. ಇದಕ್ಕೆಲ್ಲಾ ನಮ್ಮ ಮನಸನ್ನು ಹದಗೊಳಿಸಿಕೊಳ್ಳಬೇಕು. ಮಕ್ಕಳ ಜೀವನ ರೂಪಿಸಿಕೊಳ್ಳಲು ಅನುವಾಗಲು ನಾವು ಬೇರೆ ಆಸಕ್ತಿಗಳನ್ನು ಬೆಳೆಸಿಕೊಳ್ಳಲು ಸೂಕ್ತ ಸಮಯ.ಈ ಸಮಯದಲ್ಲಿ ನಾವು ಮಕ್ಕಳಾಗಿ ನಮ್ಮ ಮಕ್ಕಳ ಮಾತುಗಳನ್ನು ಕೇಳುವುದು ಒಳಿತು.

ನೀತಿ ಸಾರದಲ್ಲಿ ಹೀಗಿದೆ,

ರಾಜವತ್ಪಂಚವರ್ಷಾಣಿ ದಶವರ್ಷಾಣಿ ದಾಸವತ್
ಪ್ರಾಪ್ತೇತು ಷೋಡಷೇ ವರ್ಷೇ ಪುತ್ರಂ ಮಿತ್ರವದಾಚರೇತ್

ಮಗು ೫ ವರ್ಷ ತುಂಬುವವರೆಗೊ ರಾಜಕುಮಾರನಂತೆ ಕಾಣಿ, ೧೫ ನೆ ವಯಸ್ಸಿನವರೆಗೆ ದಾಸನಂತೆ, ೧೬ ವರ್ಷ ತುಂಬಿದ ನಂತರ ಮಿತ್ರನಂತೆ ಕಾಣಿ. ಇಂದಿನ ದಿನದಲ್ಲಿ ೧೦ ನೆಯ ವಯಸ್ಸಿನವರೆಗೂ ರಾಜಕುಮಾರನಂತೆ ಕಂಡು, ನಂತರ ೨೦ ರವರೆಗೂ ಮಿತ್ರನಂತೆ ಕಂಡು ೨೦ ರ ನಂತರ ಮಕ್ಕಳನ್ನು ಪೋಷಕನಂತೆ ಕಾಣುವುದು ಸರಿಯೆನ್ನಿಸುತ್ತದೆ.

ವಿಶೇಷ ಸೂಚನೆ: ಈ ಲೇಖನ ನಮ್ಮ ಮುಂದಿನ ಪೀಳೇಗೆಗೆ ನಾವು ಮಾದರಿಯಾಗಬೇಕೆಂಬ ಉದ್ದೇಶದಿಂದ ಬರೆದದ್ದು. ಒಂದು ಹಿಂದಿನ ತಲೆಮಾರಿನಲ್ಲಿ ಈ ರೀತಿಯ ಯೋಚನೆ ಸ್ವಲ್ಪ ಕಡಿಮೆ ಎನ್ನಬಹುದು. ಅದನ್ನು ಖಂಡಿಸಲು ಖಂಡಿತಾ ಬರೆದಿದ್ದಲ್ಲ. ಇದೇನಿದ್ದರೂ ನಮಗೂ ಮತ್ತು ನಮ್ಮ ಮಕ್ಕಳಿಗೆ. ಬರೆದಿದ್ದೆಲ್ಲಾ ಎಲ್ಲಾ ಸಂದರ್ಭಗಳಲ್ಲೂ ಸರಿಯೆಂದಲ್ಲಿ. ಆದರೆ ಈ ರೀತಿಯ ವಿಚಾರ ನಮ್ಮ ಮುಂದಿನ ಪೀಳಿಗೆ ಹೆಚ್ಚು ಸುಶಿಕ್ಷಿತರಾಗಲು, ವಿಚಾರವಂತರಾಗಲು ಸಹಾಯ ಮಾಡುತ್ತದೆ.

ಲೇಖನ ಪೂರ್ತಿ ಪೋಷಕರ ಜವಾಬ್ದಾರಿಗಳನ್ನೇ ಬರೆದಿದ್ದು. ಪೋಷಕರ ಬಗೆಗೆ ಮಕ್ಕಳಿಗೂ ಜವಾಬ್ದಾರಿಗಳಿವೆ, ಹೆಚ್ಚಿವೆ. ಇಲ್ಲವೆಂದಲ್ಲ. ಇದರ ಬಗ್ಗೆ ಇನ್ನೂ ಹೆಚ್ಚಿದ್ದನ್ನು ಬರೆಯಬೇಕಾಗುತ್ತದೆ. ಮುಂದೊಮ್ಮೆ!

ಕೊನೆಗೆ ನಮ್ಮ ಡಿ ವಿ ಜಿ ಯವರ ಕಗ್ಗ, ಮಗನೇ ಆಗಲಿ ತಂದೆಯೇ ಆಗಲಿ ತಮ್ಮ ಅಹಂಕಾರಗಳನ್ನು ಬಿಟ್ಟು ಒಬ್ಬೊಬ್ಬರಿಗೂ ಸಹಕಾರಿಯಾಗಿ ನಡೆದುಕೊಳ್ಳಬೇಕು ಬಂಧ ಮುರಿಯದೆ ಇರಲು.

ತಂದೆ ಮಕ್ಕಳಿಗೆ ಹದಗೆಟ್ಟುದನ ಕಾಣೆಯಾ?|
ಹೊಂದಿರುವರವರ್ ಅಹಂತೆಯ ಮೊಳೆಯುವನಕ||
ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದು ನಿಲೆ?|
ಬಂಧ ಮುರಿವುದು ಬಳಿಕ – ಮಂಕುತಿಮ್ಮ
||

ಇದಕ್ಕೆ ಪೂರಕವಾಗಿ, ೧೮ ನೇ ಶತಮಾನದ ಕವಿ ಖಾಲಿಲ್ ಗಿಬ್ರಾನ್ ಬರೆಯುವ ಈ ಸುಂದರ ಆಂಗ್ಲ ಕವಿತೆಯನ್ನೋದಿ.

On Children
Kahlil Gibran

Your children are not your children.
They are the sons and daughters of Life’s longing for itself.
They come through you but not from you,
And though they are with you yet they belong not to you.

You may give them your love but not your thoughts,
For they have their own thoughts.
You may house their bodies but not their souls,
For their souls dwell in the house of tomorrow,
which you cannot visit, not even in your dreams.
You may strive to be like them,
but seek not to make them like you.
For life goes not backward nor tarries with yesterday.

You are the bows from which your children
as living arrows are sent forth.
The archer sees the mark upon the path of the infinite,
and He bends you with His might
that His arrows may go swift and far.
Let our bending in the archer’s hand be for gladness;
For even as He loves the arrow that flies,
so He loves also the bow that is stable.

ಚರ್ಚೆಗೆ ಮುಕ್ತ ಸ್ವಾಗತ!

Tagged as: , ,


4 ಪ್ರತಿಕ್ರಿಯೆಗಳು

  1. nice article … i feel that it high time that ppl get over the Indian Middle class mindset that their child should be a doctor / engineer only . We are not here to fulfill all that our parent wanted to be and could’nt achieve .They need to understand that we need our own identity .

  2. ಈ ಹಾಡು ಬಾಂಧವ್ಯಕ್ಕೆ ಸಾಕ್ಷಿ………….

    ಇಂತಿ ನಿಮ್ಮ ಪ್ರೀತಿಯ,
    ಶಿವಶಂಕರ ವಿಷ್ಣು ಯಳವತ್ತಿ

  3. ವಿನಯ್,
    ಇದು ಬರೀ ಮಧ್ಯಮ ವರ್ಗದ ಜನರಲ್ಲಿರುವ ತೊಂದರಯಷ್ಟೇ ಅಲ್ಲ.. ಆರ್ಥಿಕ ವಾಗಿ ಉತ್ತಮವಾಗಿರುವವರಿಗೂ , ಆರ್ಥಿಕವಾಗಿ ಕೆಳವರ್ಗಕ್ಕೆ ಸೇರುವವರಲ್ಲೂ ಕೆಲವರಲ್ಲಿ ಈ ರೀತಿಯ ಮನಸ್ಥಿತಿಯಿದೆ. ಇಂತಹ ಮನಸ್ಥಿತಿಯಿಂದ ಹೊರಬರಲು ಜನರು ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಅವಶ್ಯಕತೆಯಿದೆ.

  4. ಶಿವಶಂಕರ್ ರವರೆ..
    ನೀವು ಹೇಳಿದ್ದು ಅಕ್ಷರಶಃ ನಿಜ..

ಪ್ರತಿಕ್ರಿಯಿಸಿ